ಇಸ್ಲಾಮಾಬಾದ್: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನದಲ್ಲಿ ತೆರಿಗೆ ವಂಚಕರನ್ನು ಪತ್ತೆಹಚ್ಚಲು ಸರ್ಕಾರವು ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದೆ. ಇನ್‌ಸ್ಟಾಗ್ರಾಮ್, ಟಿಕ್‌ಟಾಕ್ ಮತ್ತು ಯೂಟ್ಯೂಬ್‌ನಲ್ಲಿ ಐಷಾರಾಮಿ ಜೀವನಶೈಲಿಯನ್ನು ಪ್ರದರ್ಶಿಸುವವರನ್ನು ಪತ್ತೆಹಚ್ಚಲು, ಪಾಕಿಸ್ತಾನದ ಫೆಡರಲ್ ಬೋರ್ಡ್ ಆಫ್ ರೆವಿನ್ಯೂ (FBR) ಇಲಾಖೆಯು ‘ಲೈಫ್‌ಸ್ಟೈಲ್ ಮಾನಿಟರಿಂಗ್ ಸೆಲ್’ ಎಂಬ ವಿಶೇಷ ಘಟಕವನ್ನು ಸ್ಥಾಪಿಸಿದೆ. ಇತ್ತೀಚೆಗೆ ನಡೆದ ಲಕ್ಷಾಂತರ ಡಾಲರ್ ಮೌಲ್ಯದ ಮದುವೆಯೊಂದು ಈ ತನಿಖೆಯ ಕೇಂದ್ರಬಿಂದುವಾಗಿದೆ.

40 ತನಿಖಾಧಿಕಾರಿಗಳ ತಂಡವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಪ್ರಭಾವಿಗಳು, ಸೆಲೆಬ್ರಿಟಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಇತರ ವ್ಯಾಪಾರಸ್ಥರ ಪೋಸ್ಟ್‌ಗಳನ್ನು ಪರಿಶೀಲಿಸುತ್ತಿದೆ. ಅವರ ಐಷಾರಾಮಿ ಖರ್ಚುವೆಚ್ಚಗಳು ಮತ್ತು ಅವರು ಸಲ್ಲಿಸಿರುವ ಆದಾಯ ತೆರಿಗೆ ವಿವರಗಳ ನಡುವಿನ ವ್ಯತ್ಯಾಸವನ್ನು ಪತ್ತೆಹಚ್ಚುವುದು ಈ ತನಿಖೆಯ ಮುಖ್ಯ ಉದ್ದೇಶವಾಗಿದೆ. “ಅವರ ಇನ್‌ಸ್ಟಾಗ್ರಾಮ್ ಖಾತೆಗಳು ಸಾರ್ವಜನಿಕ ಘೋಷಣೆಗಳಿದ್ದಂತೆ. ಅದನ್ನು ನೋಡಿ ಕೆಲವೇ ಗಂಟೆಗಳಲ್ಲಿ ತೆರಿಗೆ ವಂಚನೆ ಪ್ರಕರಣಗಳನ್ನು ದಾಖಲಿಸಬಹುದು” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದಾಯ ಸಂಗ್ರಹಣೆ ಗುರಿಗಳನ್ನು ತಲುಪಲು ಪಾಕಿಸ್ತಾನವು ನಿರಂತರವಾಗಿ ವಿಫಲವಾಗುತ್ತಿದ್ದು, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವಿಧಿಸಿರುವ ಕಠಿಣ ಗುರಿಗಳನ್ನು ತಲುಪುವ ಒತ್ತಡದಲ್ಲಿದೆ. ಏಷ್ಯಾದಲ್ಲೇ ಅತಿ ಕಡಿಮೆ ತೆರಿಗೆ-ಜಿಡಿಪಿ ಅನುಪಾತವನ್ನು ಹೊಂದಿರುವ ಪಾಕಿಸ್ತಾನದಲ್ಲಿ, ಕೇವಲ ಶೇ.2 ಕ್ಕಿಂತ ಕಡಿಮೆ ಜನರು ಆದಾಯ ತೆರಿಗೆ ಪಾವತಿಸುತ್ತಾರೆ. ಈ ಸಮಸ್ಯೆಯನ್ನು ನಿಭಾಯಿಸುವ ಉದ್ದೇಶದಿಂದಲೇ ಹೊಸ ಘಟಕವನ್ನು ರಚಿಸಲಾಗಿದೆ. ಈ ಘಟಕವು ಅನುಮಾನಾಸ್ಪದ ವ್ಯಕ್ತಿಗಳ ಡಿಜಿಟಲ್ ಪ್ರೊಫೈಲ್‌ಗಳನ್ನು ನಿರ್ಮಿಸಿ, ಅವರ ಜೀವನಶೈಲಿಯ ಹಿಂದಿನ ಹಣದ ಮೂಲವನ್ನು ಅಂದಾಜಿಸಿ, ತೆರಿಗೆ ಅಥವಾ ಅಕ್ರಮ ಹಣ ವರ್ಗಾವಣೆ ತನಿಖೆಗಳಿಗೆ ವರದಿ ಸಿದ್ಧಪಡಿಸುತ್ತದೆ. ಸಾಕ್ಷ್ಯಗಳಿಗಾಗಿ ಸ್ಕ್ರೀನ್‌ಶಾಟ್‌ಗಳು ಮತ್ತು ಟೈಮ್‌ಸ್ಟ್ಯಾಂಪ್‌ಗಳ ಡೇಟಾಬೇಸ್ ಅನ್ನು ಸಹ ನಿರ್ವಹಿಸಲಾಗುತ್ತದೆ.
ಕೋಟ್ಯಂತರ ರೂಪಾಯಿ ಮದುವೆಯ ಮೇಲೆ ಕಣ್ಣು
ಅಧಿಕಾರಿಗಳ ಪರಿಶೀಲನೆಯಲ್ಲಿರುವ ಒಂದು ಮದುವೆಗೆ ಸುಮಾರು 248 ದಶಲಕ್ಷ ಪಾಕಿಸ್ತಾನಿ ರೂಪಾಯಿ (ಸುಮಾರು 878,000 ಡಾಲರ್ ಅಂದರೆ 7.80 ಕೋಟಿ ಭಾರತೀಯ ರೂಪಾಯಿ) ಖರ್ಚಾಗಿದೆ. ವಜ್ರ ಮತ್ತು ಚಿನ್ನದ ಸೆಟ್‌ಗಳಿಗೆ ಸುಮಾರು 283,000 ಡಾಲರ್ ಮತ್ತು ದಕ್ಷಿಣ ಏಷ್ಯಾದ ಪ್ರಮುಖ ವಿನ್ಯಾಸಕಾರರು ಸಿದ್ಧಪಡಿಸಿದ ವಧುವಿನ ಉಡುಪುಗಳಿಗೆ 124,000 ಡಾಲರ್ ಖರ್ಚು ಮಾಡಲಾಗಿದೆ. ಅತಿಥಿಗಳನ್ನು ಹೂವಿನ ಕಮಾನುಗಳ ಮೂಲಕ ಸ್ವಾಗತಿಸಲಾಗಿದ್ದು, ಆಕಾಶದಲ್ಲಿ ಡ್ರೋನ್ ಲೈಟ್ ಶೋ ಆಯೋಜಿಸಲಾಗಿತ್ತು. ಆರು ದಿನಗಳ ಕಾಲ ನಡೆದ ಈ ಸಂಭ್ರಮಾಚರಣೆಯಲ್ಲಿ ಉನ್ನತ ಮೇಕಪ್ ಕಲಾವಿದರು, ಡಿಜೆಗಳು ಮತ್ತು ಸಂಗೀತ ತಂಡಗಳು ಭಾಗವಹಿಸಿದ್ದವು.

“ಮದುವೆಯ ಪೋಸ್ಟ್‌ಗಳಲ್ಲಿ ಜನರು ತಾವಾಗಿಯೇ ಈವೆಂಟ್ ಮ್ಯಾನೇಜರ್‌ಗಳು, ಅಡುಗೆಯವರು, ಆಭರಣಕಾರರನ್ನು ಟ್ಯಾಗ್ ಮಾಡುತ್ತಾರೆ. ಇದು ನಮ್ಮ ಕೆಲಸವನ್ನು ಸುಲಭಗೊಳಿಸಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮದುವೆಗೆ ಸಂಬಂಧಿಸಿದ ಎರಡೂ ಕುಟುಂಬಗಳು ಘೋಷಿಸಿದ ಆದಾಯಕ್ಕೂ, ಅವರು ಮಾಡಿದ ಖರ್ಚಿಗೂ ತಾಳೆಯಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಹಿಂದೆಯೂ ಇಂತಹ ಪ್ರಯತ್ನಗಳು ವಿಫಲವಾಗಿದ್ದರೂ, ಸೋಷಿಯಲ್ ಮೀಡಿಯಾ ಮೇಲೆ ಕೇಂದ್ರೀಕರಿಸಿರುವ ಈ ಹೊಸ ತಂತ್ರವು, ಘೋಷಿಸದ ಸಂಪತ್ತನ್ನು ಪತ್ತೆಹಚ್ಚಲು ಬಲವಾದ ಸುಳಿವುಗಳನ್ನು ನೀಡುತ್ತದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.