ಲಖನೌ: ಉತ್ತರ ಪ್ರದೇಶದ ಮಿಲ್ಕಿಪುರ್ ಉಪಚುನಾವಣೆಯಲ್ಲಿ (Milkipur Bypoll) ಸಮಾಜವಾದಿ ಪಕ್ಷದ ವಿರುದ್ಧದ ರಾಜಕೀಯ ಪೈಪೋಟಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿಯ ಚಂದ್ರಭಾನು ಪಾಸ್ವಾನ್ 61,710 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. , ತಮಿಳುನಾಡಿನ ಇರೋಡ್ (ಈಸ್ಟ್) ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿ ಚಂದಿರಕುಮಾರ್ ವಿ.ಸಿ. 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ.
2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಿಲ್ಕಿಪುರ್ ಕ್ಷೇತ್ರ ಅಯೋಧ್ಯಾ ಜಿಲ್ಲೆಯಲ್ಲಿ ಬಿಜೆಪಿ ಸೋತ ಏಕೈಕ ಕ್ಷೇತ್ರವಾಗಿತ್ತು. ಈ ಕ್ಷೇತ್ರ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿದೆ. 2024 ಸಾರ್ವತ್ರಿಕ ಚುನಾವಣೆಯಲ್ಲಿ ಈ ಲೋಕಸಭಾ ಕ್ಷೇತ್ರ ಎಸ್‌ಪಿ ವಶವಾಗಿತ್ತು. ಮಿಲ್ಕಿಪುರ ಕ್ಷೇತ್ರದ ಅವಧೇಶ್ ಪ್ರಸಾದ್ ಗೆಲುವುಸ ಸಾಧಿಸಿದ್ದರು. ಅದಕ್ಕಾಗಿ ಅವರು ಮಿಲ್ಕಿಪುರವನ್ನು ತೊರೆದಿದ್ದರು. ಇದೀಗ ಮಿಲ್ಕಿಪುರವನ್ನು ಬಿಜೆಪಿ ವಾಪಸ್ ಪಡೆದುಕೊಂಡು ಸೇಡು ತೀರಿಸಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಪಾಸ್ವಾನ್ 1.46 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದರೆ. ಸಮೀಪದ ಸ್ಪರ್ಧಿ ಹಾಗೂ ಅವಧೇಶ್ ಪುತ್ರ ಅಜಿತ್ ಪ್ರಸಾದ್ 84,687 ಮತಗಳನ್ನು ಗಳಿಸಿದ್ದಾರೆ. ಆಜಾದ್ ಸಮಾಜ ಪಕ್ಷ (ಕಾನ್ಷಿ ರಾಮ್) ಪಕ್ಷದ ಸಂತೋಷ್ ಕುಮಾರ್ 5,158 ಮತಗಳನ್ನು ಗಳಿಸಿದ್ದಾರೆ.
ಎಸ್‌ಪಿಗೆ ಹಿನ್ನಡೆ
ಮಿಲ್ಕಿಪುರ್ ಕ್ಷೇತ್ರದ ಶಾಸಕರಾಗಿದ್ದ ಅವಧೇಶ್ ಪ್ರಸಾದ್ 2024ರ ಲೋಕಸಭಾ ಚುನಾವಣೆಯಲ್ಲಿ ಫೈಜಾಬಾದ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ನಂತರ ತಮ್ಮ ಸ್ಥಾನ ಖಾಲಿಯಾಗಿತ್ತು. ಎಸ್‌ಪಿಯು ಅವಧೇಶ್ ಪುತ್ರ ಅಜಿತ್ ಪ್ರಸಾದ್ ಅವರನ್ನು ಉಪಚುನಾವಣೆಗೆ ಕಣಕ್ಕಿಳಿಸಿದ್ದರೆ , ಬಿಜೆಪಿಯು ತನ್ನ ಪಕ್ಷದ ನಾಯಕರಾದ ಪಾಸ್ವಾನ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತು. ಇಬ್ಬರೂ ಪಾಸಿ ಸಮುದಾಯದವರಾಗಿದ್ದಾರೆ.
ಬಿಎಸ್‌ಪಿ ಈ ಉಪಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ಕಾಂಗ್ರೆಸ್ ತನ್ನ ಮೈತ್ರಿ ಪಕ್ಷವಾದ ಎಸ್‌ಪಿಗೆ ಬೆಂಬಲ ನೀಡಿತ್ತು
ಮಿಲ್ಕಿಪುರ್ ಅಭಿವೃದ್ಧಿ: ಪಾಸ್ವಾನ್
ಮತ ಎಣಿಕೆಯ ತಾಣದಲ್ಲಿ ಪಾಸ್ವಾನ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾರ್ಗದರ್ಶನ ಮತ್ತು ಬೆಂಬಲಕ್ಕೆ ಧನ್ಯವಾದ ವ್ಯಕ್ತಪಡಿಸಿದರು. ಅವರು ಮತದಾರರಿಗೂ ಕೃತಜ್ಞತೆ ಸಲ್ಲಿಸಿದರು
ಎಸ್‌ಪಿ ಸಂಸದನಿಂದ ಅಕ್ರಮದ ಆರೋಪ
ಎಸ್‌ಪಿ ಸಂಸದ ಅವಧೇಶ್ ಪ್ರಸಾದ್, ತಮ್ಮ ಪುತ್ರನ ಸೋಲಿಗೆ ಆಡಳಿತ ಯಂತ್ರದ ದುರುಪಯೋಗವೇ ಕಾರಣ ಎಂದು ಹೇಳಿದ್ದಾರೆ. ಅಧಿಕಾರಿಗಳು ರಾಜ್ಯ ಸರ್ಕಾರದ ಒತ್ತಡದಲ್ಲಿ ಕಾರ್ಯನಿರ್ವಹಿಸಿದರು” ಎಂದು ಅವರು ಆರೋಪಿಸಿದ್ದಾರೆ.