ಗುವಾಹಟಿ: ಅಸ್ಸಾಂನ ಕಾಕೋಪಥಾರ್ ಪ್ರದೇಶದಲ್ಲಿ ಶುಕ್ರವಾರ ಮಧ್ಯರಾತ್ರಿ ಭಾರತೀಯ ಸೇನಾ ಶಿಬಿರದ ಮೇಲೆ ಅಪರಿಚಿತ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ.
ರಕ್ಷಣಾ ಮೂಲಗಳ ಪ್ರಕಾರ, ಶುಕ್ರವಾರ ಮಧ್ಯರಾತ್ರಿ ಸುಮಾರು 12:30ಕ್ಕೆ ಚಲಿಸುತ್ತಿದ್ದ ವಾಹನದಿಂದಲೇ ಉಗ್ರರು ಕಾಕೋಪಥಾರ್ ಸೇನಾ ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕರ್ತವ್ಯದಲ್ಲಿದ್ದ ಯೋಧರು ತಕ್ಷಣವೇ ಪ್ರತಿದಾಳಿ ನಡೆಸಿದ್ದು, ಶಿಬಿರದ ಸಮೀಪದಲ್ಲಿದ್ದ ನಾಗರಿಕರ ಮನೆಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿದ್ದಾರೆ.
ದಾಳಿಯಲ್ಲಿ ಮೂರು ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್‌ಗಳನ್ನು (ಯುಬಿಜಿಎಲ್) ಬಳಸಲಾಗಿದ್ದು, ನಂತರ ಸುಮಾರು ಅರ್ಧ ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದೆ. “ಮೂವರು ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದ್ದು, ಪೊಲೀಸರ ಸಹಯೋಗದೊಂದಿಗೆ ಜಂಟಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ” ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ದಾಳಿಕೋರರು ಡೂಮ್‌ಡೂಮಾ ಕಡೆಯಿಂದ ಟ್ರಕ್‌ನಲ್ಲಿ ಬಂದು, ಗುಂಡಿನ ದಾಳಿ ನಡೆಸಿ ಅರುಣಾಚಲ ಪ್ರದೇಶದ ಕಡೆಗೆ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಸ್ಸಾಂ-ಅರುಣಾಚಲ ಗಡಿಯ ನೋವಾ ದಿಹಿಂಗ್ ನದಿ ಬಳಿಯ ತೆಂಗಾಪಾನಿ ಘಾಟ್‌ನಲ್ಲಿ, ದಾಳಿಗೆ ಬಳಸಿದ್ದ ಶಂಕಿತ ವಾಹನವನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಈ ದಾಳಿಯ ಹಿಂದೆ ಉಲ್ಫಾ (ಸ್ವತಂತ್ರ) ಸಂಘಟನೆಯ ಕೈವಾಡವಿದೆ ಎಂದು ಶಂಕಿಸಲಾಗಿದೆ.
ಘಟನೆಯ ನಂತರ, ಸೇನೆ ಮತ್ತು ಪೊಲೀಸರು ದಾಳಿಕೋರರನ್ನು ಪತ್ತೆಹಚ್ಚಲು ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಸ್ಸಾಂ-ಅರುಣಾಚಲ ಪ್ರದೇಶ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಭದ್ರತಾ ಪಡೆಗಳು ಗಸ್ತು ತೀವ್ರಗೊಳಿಸಿವೆ.
“ಮಧ್ಯರಾತ್ರಿ ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿಸಿತು. ಮೊದಲು ಮಳೆ ಬರುತ್ತಿದೆ ಎಂದುಕೊಂಡೆವು, ಆದರೆ ನಂತರ ಅದು ಗುಂಡಿನ ದಾಳಿ ಎಂದು ತಿಳಿಯಿತು. ಟ್ರಕ್‌ನಲ್ಲಿ ಬಂದ ಗುಂಪೊಂದು ಶಿಬಿರದ ಮೇಲೆ ಗುಂಡು ಹಾರಿಸಿತು. ಸೇನೆಯೂ ಪ್ರತಿದಾಳಿ ನಡೆಸಿತು. ನಾವಿನ್ನೂ ಭಯಭೀತರಾಗಿದ್ದೇವೆ” ಎಂದು ಸ್ಥಳೀಯರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.