ಬೆಂಗಳೂರು: ಮೊದಲೆಲ್ಲ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಎಂದರೆ ಶ್ರೀಮಂತರ ಹೂಡಿಕೆ ವಿಧಾನ ಎಂಬ ಮಾತಿತ್ತು. ಲಕ್ಷ ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು ಎಂಬ ಅಲಿಖಿತ ನಿಯಮವಿತ್ತು. ಆದರೀಗ, ಮ್ಯೂಚುವಲ್ ಫಂಡ್ ಎಸ್ಐಪಿಯು (Micro SIP) ಬಡವರು, ಮಧ್ಯಮ ವರ್ಗದವರೂ ಹೂಡಿಕೆ ಮಾಡುವ ಅವಕಾಶ ಕಲ್ಪಿಸಿದೆ. ಇತ್ತೀಚೆಗಂತೂ ಮಾಸಿಕ 100-250 ರೂ.ವರೆಗೆ ಹೂಡಿಕೆ ಮಾಡುವ ಮೈಕ್ರೋ ಎಸ್ಐಪಿ ಯೋಜನೆಗಳು ಜನಪ್ರಿಯವಾಗುತ್ತಿವೆ. ಹಾಗಾದರೆ, ಯಾರೆಲ್ಲ ಮ್ಯೂಚುವಲ್ ಫಂಡ್ ಮೈಕ್ರೋ ಎಸ್ಐಪಿಯಲ್ಲಿ ಹೂಡಿಕೆ ಮಾಡಬಹುದು? ಲಾಭ ಹೇಗಿರಬಹುದು ಎಂಬುದರ ಲೆಕ್ಕಾಚಾರ ಇಲ್ಲಿದೆ.
ಮೈಕ್ರೋ ಎಸ್ಐಪಿ ಒಂದು ಸಣ್ಣ ಪ್ರಮಾಣದ ಮ್ಯೂಚುವಲ್ ಫಂಡ್ ಹೂಡಿಕೆಯ ಸಾಧನವಾಗಿದೆ. ಪ್ರತಿ ದಿನ, ಪ್ರತಿ ವಾರ ಅಥವಾ ಪ್ರತಿ ತಿಂಗಳು 250 ರೂಪಾಯಿ ಎಸ್ಐಪಿ ಮಾಡಲು ಅವಕಾಶವಿದೆ. ಸದ್ಯ ಎಸ್ಬಿಐ ಬ್ಯಾಲೆನ್ಸ್ಡ್ ಅಡ್ವಾಂಡೇಟ್ ಫಂಡ್ನಲ್ಲಿ ಮೈಕ್ರೊ ಎಸ್ಐಪಿ ಆಯ್ಕೆ ಇದೆ. ಕೆಲ ದಿನಗಳ ಹಿಂದಷ್ಟೇ ಕೋಟಕ್ ಮಹೀಂದ್ರಾ ಬ್ಯಾಂಕ್ ಕೂಡ 250 ರೂ. ಎಸ್ಐಪಿ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅವಕಾಶಗಳು ತೆರೆದುಕೊಳ್ಳಲಿವೆ.
ಜನರು ತೊಡಗಿಸಿದ ಹಣವನ್ನು ಷೇರುಪೇಟೆ ಮತ್ತು ಬಾಂಡ್ ನಂತಹ ಡೆಟ್ ಹೂಡಿಕೆಗಳಲ್ಲಿ ಎಸ್ಬಿಐ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್ ಹೂಡಿಕೆ ಮಾಡುವುದರಿಂದ ಮಾರುಕಟ್ಟೆ ಏರಿಳಿತವನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಈ ಫಂಡ್ ನ ಒಂದು ವರ್ಷದ ಗಳಿಕೆ ಶೇ 9.9ರಷ್ಟಿದ್ದು ಮೂರು ವರ್ಷದ ವಾರ್ಷಿಕ ಸರಾಸರಿ ಗಳಿಕೆ ಶೇ.12.69ರಷ್ಟಿದೆ. ಪೇಟಿಎಂ ಸೇರಿ ಹಲವು ಅಗ್ರಿಗೇಟರ್ ಗಳಲ್ಲಿ ಇವುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಈ ಫಂಡ್ ನ ಡೈರೆಕ್ಟ್ ಪ್ಲಾನ್ ನಲ್ಲಿ (ನೀವೇ ನೇರವಾಗಿ ಹೂಡಿಕೆ ಮಾಡಿದರೆ ಶೇ 0.69ರಷ್ಟು (ಎಕ್ಸ್ ಪೆನ್ಸ್ ರೇಷಿಯೊ) ಕಮಿಷನ್ ಇದೆ. ರೆಗ್ಯುಲರ್ ಫಂಡ್ ನಲ್ಲಿ ಮ್ಯೂಚುವಲ್ ಫಂಡ್ ವಿತರಕರ ಮೂಲಕ ತೊಡಗಿಸಿದರೆ ಶೇ 1.57ರಷ್ಟು (ಎಕ್ಸ್ ಪೆನ್ಸ್ ರೇಷಿಯೊ) ಕಮಿಷನ್ ಕೊಡಬೇಕಾಗುತ್ತದೆ. ಎಸ್ಬಿಐ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್ನಲ್ಲಿ ಹೂಡಿಕೆ ಮಾಡಲು ಸದ್ಯ ಎಸ್ಬಿಐ ಯೊನೊ, ಎಸ್ಬಿಐ ಮ್ಯೂಚುವಲ್ ಫಂಡ್ ಪ್ಲಾಟ್ ಫಾರಂಗಳನ್ನು ಬಳಸಬಹುದಾಗಿದೆ.
ಯಾರಿಗೆ ಈ ಮಾದರಿಯ ಹೂಡಿಕೆ ಅನುಕೂಲ?
ಹೊಸದಾಗಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವವರಿಗೆ, ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳಲ್ಲಿ ವಾಸವಿರುವವರಿಗೆ, ವ್ಯಾಪಾರಸ್ಥರಿಗೆ, ಪ್ರತಿದಿನ ಆದಾಯ ಗಳಿಸುವವರಿಗೆ, ಪಾರ್ಟ್ ಟೈಂ ಕೆಲಸ ಮಾಡುವವರಿಗೆ, ಆಟೊ ಚಾಲಕರಿಗೆ, ಕ್ಯಾಬ್ ಚಾಲಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೀಗೆ ಪ್ರತಿಯೊಬ್ಬರಿಗೂ ಹೂಡಿಕೆ ಮಾಡಲು ಮೈಕ್ರೊ ಎಸ್ಐಪಿ ಅನುಕೂಲಕರವಾಗಿದೆ.
ಮೈಕ್ರೊ ಎಸ್ಐಪಿ ಮೂಲಕ ಹೆಚ್ಚೆಚ್ಚು ಜನರಿಗೆ ಮ್ಯೂಚುವಲ್ ಫಂಡ್ ಹೂಡಿಕೆ ತಲುಪಿಸಲು ಸಾಧ್ಯವಾಗುವ ಜೊತೆಗೆ ಹಣಕಾಸು ನಿರ್ವಹಣೆ ಮತ್ತು ಉಳಿತಾಯದ ಶಿಸ್ತನ್ನು ತರಬಹುದಾಗಿದೆ. ಉದಾಹರಣೆಗೆ ಮುಂದಿನ 25 ವರ್ಷ ಗಳವರೆಗೆ ಪ್ರತಿ ತಿಂಗಳು 250 ರೂ. ಎಸ್ಐಪಿ ಮಾಡಿದರೆ ಶೇ 12ರಷ್ಟು ಗಳಿಕೆ ಲಾಭಾಂಶ ಸಿಕ್ಕರೆ 4.25 ಲಕ್ಷ ರೂ. ಗಳಿಕೆಯಾಗುತ್ತದೆ.
ಗಮನಿಸಿ: ಗಮನಿಸಿ: ಮ್ಯೂಚುವಲ್ ಫಂಡ್ ಮೈಕ್ರೋ ಎಸ್ಐಪಿಗಳು ಕೂಡ ರಿಸ್ಕ್ ಹೊಂದಿರುತ್ತವೆ. ನಾವು ಮೈಕ್ರೋ ಎಸ್ಐಪಿ ಕುರಿತು ನಿಮಗೆ ಮಾಹಿತಿ ನೀಡಿದ್ದೇವೆ ಅಷ್ಟೆ. ಇದು ಎಸ್ಐಪಿ ಮಾಡಲು ಶಿಫಾರಸು ಖಂಡಿತ ಅಲ್ಲ, ಹೂಡಿಕೆ ಮಾಡುವ ಮುನ್ನು ಆರ್ಥಿಕ ತಜ್ಞರ ಸಲಹೆ ಪಡೆಯುವುದನ್ನು ಮರೆಯದಿರಿ.