ಚಾಮರಾಜನಗರ: ಮೈಕ್ರೋ ಫೈನಾನ್ಸ್ (Microfinance) ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ನಾಪತ್ತೆಯಾಗಿದ್ದು, ಹುಡುಕಿ ಕೊಡುವಂತೆ ತಂದೆ- ತಾಯಿ ಅಂಗಲಾಚುತ್ತಿದ್ದಾರೆ.
ನನ್ನ ಮಗ ಒಂದು ತಿಂಗಳಿಂದ ನಾಪತ್ತೆಯಾಗಿದ್ದಾನೆ ಎಂದು ಮೈಸೂರು (Mysuru) ಮೂಲದ ದಂಪತಿ ಚಾಮರಾಜನಗರ (Chamarajanagar) ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ಕಣ್ಣೀರು ಸುರಿಸಿದ್ದಾರೆ. ಮೈಸೂರು ಗುಂಡೂರಾವ್ ನಗರದ ಮಹಾದೇವಸ್ವಾಮಿ ಎಂಬವರು ಕರೆ ಮಾಡಿ ಮಗನನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ.
ನಮ್ಮ ಮಗ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಮಾಡಿಕೊಂಡಿದ್ದ. ಆದರೆ, ಅವರು ವಿಪರೀತ ಕಿರುಕುಳ ನೀಡಿದ್ದು, ಆತ ಮನೆ ಬಿಟ್ಟು ಹೋಗಿದ್ದಾನೆ ಎಂದು ಹೇಳಿದ್ದಾರೆ.
ನನ್ನ ಮಗ ಒಂದು ತಿಂಗಳಿಂದ ಇನ್ನೂ ಪತ್ತೆಯಾಗಿಲ್ಲ. ನನಗೆ ಆಕ್ಸಿಡೆಂಟ್ ಆಗಿದೆ, ಕಿವಿ ಕೇಳಿಸಲ್ಲ. ನನ್ನ ಪತ್ನಿಗೆ ಸಹ ಆರೋಗ್ಯ ಸರಿ ಇಲ್ಲ. ನನ್ನ ಮಗನನ್ನು ಹುಡುಕಿ ಕೊಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ, ಮನೆಯ ಮುಂದೆ ಬಂದು ಫೈನಾನ್ಸ್ ಸಿಬ್ಬಂದಿ ಗಲಾಟೆ ಮಾಡುತ್ತಿದ್ದಾರೆ. ಕಿರುಕುಳ ನೀಡುತ್ತಿದ್ದಾರೆ. ನಮ್ಮನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ.