ಬೆಂಗಳೂರು: ಮೈಕ್ರೋ ಫೈನಾನ್ಸ್(Micro Finance) ಕಿರುಕುಳ ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಿವಾಣ ಹಾಕಲು ಸುಗ್ರೀವಾಜ್ಞೆ(Ordinance) ಹೊರಡಿಸುವುದು ವಿಳಂಬವಾಗುತ್ತಿರುವುದೇಕೆ? ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ (G. Parameshwar) ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡ್ಮೂರು ದಿನಗಳಲ್ಲಿ ಸುಗ್ರೀವಾಜ್ಞೆ ಹೊರಡಿಸುವುದಕ್ಕಾಗಿ ಸಿಎಂ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಈ ಕುರಿತು ಪರಿಶೀಲನೆ ನಡೆಸಲು ಸಿಎಂ, ಅಧಿಕಾರಿಗಳ ತಂಡ ರಚನೆ ಮಾಡಿದ್ದಾರೆ. ಕಾನೂನು, ಸಂಸದೀಯ ವ್ಯವಹಾರ, ಆರ್ಥಿಕ ಇಲಾಖೆ ಅಧಿಕಾರಿಗಳ ತಂಡ ರಚನೆ ಮಾಡಿದ್ದಾರೆ. ಇಂತಹ ಪ್ರಕರಣಗಳಿಗೆ ತಕ್ಕಂತೆ ಈಗಾಗಲೇ ಹಲವು ಕಾನೂನುಗಳಿವೆ. ಈ ಕಾನೂನುಗಳ ಅಧ್ಯಯನ ನಡೆಸಿ ಹೊಸ ಕಾನೂನು ಮಾಡಲು ಚಿಂತನೆ ನಡೆಸಲಾಗಿದೆ. ಸದ್ಯದಲ್ಲೇ ಸುಗ್ರೀವಾಜ್ಞೆ ಹೊರಡಿಸುವ ಕಾರ್ಯವಾಗುತ್ತದೆ. ಜನರಿಗೆ ತೊಂದರೆಯಾಗುವುದಕ್ಕೆ ಕಡಿವಾಣ ಹಾಕೇ ಹಾಕುತ್ತೇವೆ ಎಂದಿದ್ದಾರೆ.
ಯಾವಾಗ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬುವುದರ ಕುರಿತು ಸಮಯ ನಿಗದಿಯಾಗಿಲ್ಲ. ಜನರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಆತ್ಮಹತ್ಯೆ,(suicied) ಊರು ಬಿಡುವ ಘಟನೆಗಳು ನಡೆಯುತ್ತಿವೆ. ಇದು ನಿಲ್ಲಬೇಕು. ನೋಂದಣಿಯಾಗದ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೂ ಕಡಿವಾಣ ಹಾಕಬೇಕು ಎಂಬ ಕಾರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೇರೆ ರಾಜ್ಯಗಳ ಕಾನೂನು ಅಧ್ಯಯನ ಮಾಡಿ ಹೊಸ ಕಾನೂನು ರೂಪಿಸುತ್ತೇವೆ ಎಂದು ಹೇಳಿದ್ದಾರೆ.