ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಜನ ರೋಸಿ ಹೋಗಿದ್ದರು. ಹೀಗಾಗಿ ಈ ವಿಷಯದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿದ್ದು, ಕಠಿಣ ನಿರ್ಧಾರ ಕೈಗೊಂಡಿದೆ.
ಇಂದು ಸಿಎಂ ನೇತೃತ್ವದಲ್ಲಿ ಈ ಕುರಿತು ಸಭೆ ನಡೆದಿದ್ದು, ಸಭೆಯ ನಂತರ ಸಿಎಂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಸಾಲ ವಸೂಲಾತಿಗೆ ರೌಡಿಶೀಟರ್ಗಳು, ಗೂಂಡಾಗಳನ್ನು ಬಳಸಲೇಬಾರದು. ಸಾಲ ವಸೂಲಾತಿ ಜವಾಬ್ದಾರಿಯನ್ನು ಫೈನಾನ್ಸ್ ಗಳು ಔಟ್ ಸೋರ್ಸ್ ಗೆ ನೀಡಬಾರದು. ಒಂದು ವೇಳೆ ಹೀಗೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಮೈಕ್ರೋಫೈನಾನ್ಸ್ ಅಸೋಸಿಯೇಷನ್ ಅಭಿಪ್ರಾಯ ಪಡೆದಿದ್ದೇನೆ. ಆರ್ ಬಿಐ ಅಧಿಕಾರಿಗಳ ಅಭಿಪ್ರಾಯವನ್ನೂ ಕೇಳಿದ್ದೇನೆ. ಯಾರಿಗೂ ಸಾಲ ಕೊಡಬೇಡಿ ಎಂದು ನಾವು ಹೇಳುವುದಿಲ್ಲ. ವಸೂಲಿ ಮಾಡುವಾಗ ಕಿರುಕುಳ ಕೊಡಲೇಬಾರದು. ಆರ್ಬಿಐ ನಿಯಮದಂತೆ ನಡೆದುಕೊಳ್ಳಬೇಕೆಂದು ಸೂಚಿಸಲಾಗಿದೆ ಎಂದಿದ್ದಾರೆ.
ಸಂಜೆ 5 ರ ನಂತರ ವಸೂಲಿಗೆ ಹೋದರೆ ಹುಷಾರ್!
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಆರ್ ಬಿಐ ನಿಯಮದಂತೆಯೇ ಸಾಲ ವಸೂಲಾತಿ ಮಾಡಬೇಕು. ಸಂಜೆ 5 ಗಂಟೆ ನಂತರ ಸಾಲ ವಸೂಲಾತಿಗೆ ಹೋಗಬಾರದು. ಮೈಕ್ರೋ ಫೈನಾನ್ಸ್, ಗಿರವಿ ಅಂಗಡಿಯವರು ಕಾನೂನಿನಡಿ ಸಾಲ ವಸೂಲಾತಿ ಮಾಡಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು
ಅನಧಿಕೃತವಾಗಿ ವ್ಯವಹಾರ ನಡೆಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾಲಗಾರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಕಾನೂನು ರೂಪಿಸುತ್ತೇವೆ. ಕಾನೂನು ಇಲಾಖೆ, ಗೃಹ ಇಲಾಖೆ, ಕಂದಾಯ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು. ನೆರೆ ರಾಜ್ಯಗಳಲ್ಲಿರುವ ಕಾನೂನು ಪರಿಶೀಲಿಸಿ ಹೊಸ ಕಾನೂನು ಜಾರಿಗೆ ತರುತ್ತೇವೆ. ಸುಗ್ರೀವಾಜ್ಞೆ ಮೂಲಕ ಕೂಡಲೇ ಹೊಸ ಕಾನೂನನ್ನು ತರುತ್ತೇವೆ. ಒಂದು ವೇಳೆ ಸಾಲಗಾರರಿಗೆ ಕಿರುಕುಳ ನೀಡಿದರೆ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಶೇ 17.07ಕ್ಕಿಂತ ಹೆಚ್ಚು ಬಡ್ಡಿ ಪಡೆದರೆ ಹುಷಾರ್!
ಆರ್ ಬಿಐ ನಿಯಮದಂತೆ ಶೇ 17.07ಕ್ಕಿಂತ ಹೆಚ್ಚು ಬಡ್ಡಿ ಪಡೆಯುವಂತಿಲ್ಲ. ಯಾವುದೇ ಸಾಲಗಾರರಿಗೆ 3 ಬಾರಿಗಿಂತ ಹೆಚ್ಚು ಸಾಲ ನೀಡುವಂತಿಲ್ಲ ಹಾಗೂ ವಸೂಲಿ ಮಾಡುವಂತಿಲ್ಲ ಎಂದು ಖಡಕ್ ಆಗಿ ಸೂಚಿಸಿದ್ದಾರೆ.
ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹಸಚಿವ ಡಾ. ಜಿ ಪರಮೇಶ್ವರ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಕಾನೂನು ಸಚಿವ ಎಚ್.ಕೆ. ಪಾಟೀಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೇರಿದಂತೆ ಹಲವರು ಭಾಗಿಯಾಗಿದ್ದರು.