ಮೆಕ್ಸಿಕೋ : ವಿಶ್ವದ ಅತಿ ಕುಖ್ಯಾತ ಡ್ರಗ್ ಮಾಫಿಯಾದ ನಾಯಕರಲ್ಲಿ ಒಬ್ಬನಾದ ನೆಮೆಸಿಯೊ ಒಸೆಗುಯೆರಾ ಸರ್ವಾಂಟೆಸ್ ಅಲಿಯಾಸ್ ‘ಎಲ್ ಮೆಂಚೋ’ ಮೆಕ್ಸಿಕೋ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾನೆ. ದಶಕಗಳಿಂದ ತಲೆಮರೆಸಿಕೊಂಡಿದ್ದ ಈತನ ಅಂತ್ಯದೊಂದಿಗೆ ಮೆಕ್ಸಿಕೋದಾದ್ಯಂತ ಭೀಕರ ಹಿಂಸಾಚಾರ ಭುಗಿಲೆದ್ದಿದ್ದು, ದೇಶದ ಪ್ರಮುಖ ನಗರಗಳು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿವೆ. ‘ಜಲಿಸ್ಕೋ ನ್ಯೂ ಜನರೇಷನ್ ಕಾರ್ಟೆಲ್’ (CJNG) ಮುಖ್ಯಸ್ಥನಾಗಿದ್ದ ಈತನ ತಲೆಗೆ ಅಮೆರಿಕ ಸರ್ಕಾರ 15 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು.

ಕಾರ್ಯಾಚರಣೆ ನಡೆದದ್ದು ಹೇಗೆ?
ಮೆಕ್ಸಿಕೋದ ರಕ್ಷಣಾ ಸಚಿವಾಲಯದ ಮಾಹಿತಿಯ ಪ್ರಕಾರ, ಪೆಸಿಫಿಕ್ ಕರಾವಳಿ ರಾಜ್ಯವಾದ ಜಲಿಸ್ಕೋದ ತಪಲ್ಪಾ ಎಂಬ ಪಟ್ಟಣದಲ್ಲಿ ಮೆಕ್ಸಿಕನ್ ವಿಶೇಷ ಪಡೆಗಳು ಈ ರಹಸ್ಯ ಕಾರ್ಯಾಚರಣೆ ನಡೆಸಿದ್ದವು. ಸೈನಿಕರು ಸುತ್ತುವರಿಯುತ್ತಿದ್ದಂತೆ ಡ್ರಗ್ ಜಾಲದ ಸದಸ್ಯರು ಏಕಾಏಕಿ ಗುಂಡಿನ ದಾಳಿ ಆರಂಭಿಸಿದರು. ಹೀಗಾಗಿ ಎರಡೂ ಕಡೆ ಗುಂಡಿನ ಚಕಮಕಿ ನಡೆಯಿತು. ಈ ಕಾಳಗದಲ್ಲಿ ತೀವ್ರವಾಗಿ ಗಾಯಗೊಂಡ ಎಲ್ ಮೆಂಚೋನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಮೆಕ್ಸಿಕೋ ಸಿಟಿಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಆತ ಮೃತಪಟ್ಟಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 9 ಕಾರ್ಟೆಲ್ ಸದಸ್ಯರು ಹತರಾಗಿದ್ದು, ಅಪಾರ ಪ್ರಮಾಣದ ರಾಕೆಟ್ ಲಾಂಚರ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೊತ್ತಿ ಉರಿಯುತ್ತಿರುವ ನಗರಗಳು
ತಮ್ಮ ನಾಯಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕೆರಳಿದ ಕಾರ್ಟೆಲ್ ಸದಸ್ಯರು ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಟ್ಟಹಾಸ ಮೆರೆದಿದ್ದಾರೆ. 250ಕ್ಕೂ ಹೆಚ್ಚು ಕಡೆಗಳಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಲಾಗಿದೆ. ಪ್ರವಾಸಿ ತಾಣವಾದ ಪೋರ್ಟೊ ವಲ್ಲಾರ್ಟಾ ಪೂರ್ತಿ ದಟ್ಟ ಹೊಗೆ ಆವರಿಸಿದ್ದು, ವಿಮಾನ ನಿಲ್ದಾಣದ ಬಳಿ ಗುಂಡಿನ ಸದ್ದು ಕೇಳಿಬಂದಿದ್ದರಿಂದ ಪ್ರವಾಸಿಗರು ದಿಕ್ಕಾಪಾಲಾಗಿ ಓಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋದ ಕಾರಣ ಏರ್ ಕೆನಡಾ, ಯುನೈಟೆಡ್ ಮತ್ತು ಅಮೆರಿಕನ್ ಏರ್‌ಲೈನ್ಸ್‌ನಂತಹ ಪ್ರಮುಖ ವಿಮಾನಯಾನ ಸಂಸ್ಥೆಗಳು ಸೇವೆ ಸ್ಥಗಿತಗೊಳಿಸಿವೆ.
ಜನಜೀವನ ಸ್ತಬ್ಧ
ಜಲಿಸ್ಕೋ ರಾಜ್ಯದ ಗವರ್ನರ್ ಪ್ಯಾಬ್ಲೊ ಲೆಮಸ್ ಅವರು ಸಾರ್ವಜನಿಕ ಸಾರಿಗೆಯನ್ನು ರದ್ದುಗೊಳಿಸಿದ್ದು, ಜನರು ಮನೆಯಿಂದ ಹೊರಬರದಂತೆ ಸೂಚಿಸಿದ್ದಾರೆ. ಮೆಕ್ಸಿಕೋದ ಎರಡನೇ ಅತಿದೊಡ್ಡ ನಗರವಾದ ಗ್ವಾಡಲಜಾರಾದಲ್ಲಿ ರಸ್ತೆಗಳಲ್ಲಿ ನಿಲ್ಲಿಸಿದ್ದ ಎಲ್ಲ ವಾಹನಗಳಿಗೆ ಬೆಂಕಿ ಹಚ್ಚಿರುವ ಕಾರಣ, ರಸ್ತೆಗಳೆಲ್ಲ ವಾಹನಗಳ ಚಿತಾಗಾರವಾಗಿ ಬದಲಾಗಿವೆ. ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದೆ. ಇಲ್ಲಿಯವರೆಗೆ ನಡೆದ ಹಿಂಸಾಚಾರದಲ್ಲಿ 7 ಮಂದಿ ಯೋಧರು ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಭಾರತೀಯರಿಗೆ ಎಚ್ಚರಿಕೆ
ಮೆಕ್ಸಿಕೋದಾದ್ಯಂತ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು, ಅಲ್ಲಿರುವ ಭಾರತೀಯ ಪ್ರಜೆಗಳಿಗೆ ಮೆಕ್ಸಿಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತುರ್ತು ಸೂಚನೆ ನೀಡಿದೆ. ಭಾರತೀಯರು ಜನದಟ್ಟಣೆಯ ಪ್ರದೇಶಗಳಿಂದ ದೂರವಿರಬೇಕು, ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು ಮತ್ತು ಅನಗತ್ಯವಾಗಿ ಪ್ರಯಾಣಿಸದಂತೆ ಸಲಹೆ ನೀಡಲಾಗಿದೆ. ಅಮೆರಿಕ ಮತ್ತು ಕೆನಡಾ ಕೂಡ ತಮ್ಮ ಪ್ರಜೆಗಳಿಗೆ ಇದೇ ರೀತಿಯ ಎಚ್ಚರಿಕೆಯನ್ನು ನೀಡಿವೆ.
ಯಾರು ಈ ಎಲ್ ಮೆಂಚೋ?
59 ವರ್ಷದ ಎಲ್ ಮೆಂಚೋ, ಕೇವಲ ಮೆಕ್ಸಿಕೋ ಮಾತ್ರವಲ್ಲದೆ ಅಮೆರಿಕಕ್ಕೂ ದೊಡ್ಡ ತಲೆನೋವಾಗಿದ್ದ. ಈತನ ಕಾರ್ಟೆಲ್ ಅಮೆರಿಕದ 50 ರಾಜ್ಯಗಳಲ್ಲಿ ಫೆಂಟಾನಿಲ್ ಮತ್ತು ಕೊಕೇನ್‌ನಂತಹ ಮಾದಕ ದ್ರವ್ಯಗಳನ್ನು ಪೂರೈಸುವ ಜಾಲ ಹೊಂದಿತ್ತು. ಈ ಹಿಂದೆ ಮೆಕ್ಸಿಕನ್ ಮಿಲಿಟರಿ ಹೆಲಿಕಾಪ್ಟರ್ ಅನ್ನು ರಾಕೆಟ್ ಚಾಲಿತ ಗ್ರೆನೇಡ್ ಮೂಲಕ ಹೊಡೆದುರುಳಿಸಿದ ಕುಖ್ಯಾತಿಯೂ ಈತನ ತಂಡಕ್ಕಿದೆ. ಈ ಕಾರ್ಯಾಚರಣೆಯು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡದ ನಡುವೆ ಮೆಕ್ಸಿಕೋ ಸರ್ಕಾರಕ್ಕೆ ದೊರೆತ ದೊಡ್ಡ ಜಯ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ.. ಆಫೀಸ್‌ಗೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ!



















