ಬೆಂಗಳೂರು : ನಗರದ ಜೀವನಾಡಿ ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ಗುರುವಾರ ಬೆಳಗ್ಗೆ ವ್ಯತ್ಯಯ ಉಂಟಾಗಿದ್ದು, ನೇರಳೆ ಮಾರ್ಗದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಮಾಹಿತಿಗಳ ಪ್ರಕಾರ, ಮೆಟ್ರೋ ರೈಲೊಂದು ಕೆಟ್ಟು ನಿಂತ ಕಾರಣ ಚಲ್ಲಘಟ್ಟದಿಂದ ವೈಟ್ ಫೀಲ್ಡ್ಗೆ ಸಂಚರಿಸುವ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಿದೆ. ಚಲ್ಲಘಟ್ಟಹಾಗೂ ವೈಟ್ಫೀಲ್ಡ್ನಿಂದ ಹೊರಟ ಮೆಟ್ರೋ ರೈಲುಗಳು ಎಲ್ಲೆಲ್ಲಿ ಇವೆಯೋ ಆ ನಿಲ್ದಾಣಗಳಲ್ಲಿಯೇ ಸುಮಾರು 10 ನಿಮಿಷಗಳಿಗೂ ಹೆಚ್ಚು ಸಮಯ ನಿಂತಿವೆ.
ಮೆಟ್ರೋ ರೈಲು ಸುಮಾರು 10 ನಿಮಿಷಗಳಿಂದಲೂ ನಿಲ್ದಾಣದಲ್ಲಿಯೇ ನಿಂತಿದ್ದು, ಆನಂತರ ಪ್ರಯಾಣ ಆರಂಭಿಸುತ್ತಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಮೆಟ್ರೋ ರೈಲು ಮುಂದಕ್ಕೆ ಚಲಿಸದೆ ಇರುವ ಬಗ್ಗೆ ಸ್ಥಳದಲ್ಲಿರುವ ಸಿಬ್ಬಂದಿ ಕಾರಣ ನೀಡಿಲ್ಲ. ಆದರೆ, ನಂತರ ಬಿಎಂಆರ್ಸಿಎಲ್ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
‘ವಿಳಂಬಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ಮುಂದಿನ ಮಾಹಿತಿ ಸಿಕ್ಕ ತಕ್ಷಣ ನಿಮಗೆ ತಿಳಿಸುತ್ತೇವೆ’ ಎಂದು ಮೆಟ್ರೋ ರೈಲಿನಲ್ಲಿ ಅನೌನ್ಸ್ ಮಾಡಲಾಗಿದೆ. ಸದ್ಯ ಮೆಟ್ರೋ ರೈಲು ಸಂಚಾರ ಶುರುವಾಗಿದ್ದು, ವಿಳಂಬವಾಗಿ ಸಂಚರಿಸುತ್ತಿದೆ.
ಒಟ್ಟಿನಲ್ಲಿ ಬೆಳಗ್ಗೆ ಕಚೇರಿ ಹಾಗೂ ಇತರೆ ಕೆಲಸಗಳಿಗೆ ತೆರಳುವ ಅವಸರದಲ್ಲಿದ್ದ ಜನರಿಗೆ ಮೆಟ್ರೋ ಸೇವೆ ಕೈಕೊಟ್ಟಿದೆ. ಹಿಂದಿನ ಹಾಗೂ ಮುಂದಿನ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿ, ಪ್ಲಾಟ್ಫಾರ್ಮ್ಗಳು ಜನರಿಂದ ತುಂಬಿ ತುಳುಕುತ್ತಿದೆ.
ಇದನ್ನೂ ಓದಿ : ಕೇವಲ 50 ರೂಪಾಯಿ ಪಾವತಿಸಿ, ಆಧಾರ್ ಸ್ಮಾರ್ಟ್ ಕಾರ್ಡ್ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ



















