ಕಲಬುರಗಿ: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಗುಲ್ಬರ್ಗ ವಿಶ್ವವಿದ್ಯಾಲಯ ಚೆಲ್ಲಾಟವಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ವಿವಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಅಂಕಪಟ್ಟಿ ನೀಡದೆ ವಿವಿ ಚೆಲ್ಲಾಟವಾಡುತ್ತಿದ್ದು, ಎರಡ್ಮೂರು ವರ್ಷಗಳು ಕಳೆದರೂ ವಿದ್ಯಾರ್ಥಿಗಳಿಗೆ ಅಂಕ ಪಟ್ಟಿ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ವಿದ್ಯಾರ್ಥಿಗಳು ಅಂಕಪಟ್ಟಿ, ಪದವಿ ಪಾಸ್ ಸರ್ಟಿಫಿಕೇಟ್ ಗಾಗಿ ಅಲೆದಾಡುವಂತಾಗಿದೆ. ದೂರದ ಊರುಗಳಿಂದ ಬಂದು ಪದವಿ ಪಡೆದ ವಿದ್ಯರ್ಥಿಗಳು ವಿವಿಗೆ ಅಲೆದಾಟ ನಡೆಸಿ ಸುಸ್ತಾಗಿ ಹೋಗುತ್ತಿದ್ದಾರೆ.
ಆದರೆ, USMS ಆಪ್ ನಲ್ಲಿ ದೋಷವಾಗಿರುವ ಹಿನ್ನೆಲೆಯಲ್ಲಿ ಅಂಕಪಟ್ಟಿ ಸಿಗುವುದು ವಿಳಂಬವಾಗುತ್ತಿವೆ. ಹೊರ ಗುತ್ತಿಗೆ ಸಿಬ್ಬಂದಿ ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ಸಮಸ್ಯೆ ಹೆಚ್ಚಾಗುತ್ತಿವೆ ಎಂದು ಅಧಿಕಾರಿಗಳು ಆರೋಪಿಸುತ್ತಿದ್ದಾರೆ.
ಗುಲ್ಬರ್ಗ ವಿವಿಯ ಇಂತಹ ಯಡವಟ್ಟಿನಿಂದಾಗಿ ಹೈರಾಣಾಗಿರುವ ವಿದ್ಯಾರ್ಥಿಗಳು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ವಿದ್ಯಾರ್ಥಿಗಳ ದೂರಿನ ಹಿನ್ನೆಲೆಯಲ್ಲಿ ಗುಲ್ಬರ್ಗ ವಿವಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸರ್ಚ್ ವಾರೆಂಟ್ ತೆಗೆದುಕೊಂಡು ವಿವಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಬಿ.ಕೆ. ಉಮೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಗುಲ್ಬರ್ಗ ವಿವಿಯ ದಾಖಲೆಗಳನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ. ಹಣಕ್ಕಾಗಿ ಅಂಕಪಟ್ಟಿ ಮಾರಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.