ಬೆಂಗಳೂರು : ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರು ಯುವತಿಯೊಬ್ಬಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳುಹಿಸಿದ್ದಾರೆ ಎನ್ನಲಾದ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಬೆಳವಣಿಗೆಯಿಂದ ಎಚ್ಚೆತ್ತಿರುವ ಶಾಸಕರು, ತಮ್ಮ ಅಧಿಕೃತ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅನುಷ್ಕಾ ಎಂಬ ಯುವತಿಯ ಇನ್‌ಸ್ಟಾಗ್ರಾಮ್ ಖಾತೆಗೆ ಶಾಸಕ ಸಿ.ಕೆ. ರಾಮಮೂರ್ತಿ ಅವರ ಅಧಿಕೃತ ಖಾತೆಯಿಂದ ‘ಗುಡ್ ಮಾರ್ನಿಂಗ್’ ಮತ್ತು ‘ಗುಡ್ ನೈಟ್’ ಎಂಬ ಸಂದೇಶಗಳು ಹೋಗಿದ್ದು, ಶಾಸಕರು ತಮಗೆ ಸಂದೇಶ ಕಳುಹಿಸಿರುವ ಸ್ಕ್ರೀನ್ ಶಾಟ್‌ಗಳನ್ನು ಯುವತಿ ತನ್ನ ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದಾಳೆ. ಇದು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ವಿರುದ್ಧ ಟ್ರೋಲ್‌ಗಳು ಶುರುವಾಗಿವೆ.
ಈ ವಿಚಾರವಾಗಿ ತಕ್ಷಣವೇ ಪ್ರತಿಕ್ರಿಯಿಸಿರುವ ಶಾಸಕ ಸಿ.ಕೆ. ರಾಮಮೂರ್ತಿ, ‘ನನ್ನ ಇನ್‌ಸ್ಟಾಗ್ರಾಮ್ ಖಾತೆ ದುಷ್ಕರ್ಮಿಗಳಿಂದ ಹ್ಯಾಕ್ ಆಗಿದೆ. ನಾನು ಯಾರಿಗೂ ಈ ರೀತಿಯ ಸಂದೇಶಗಳನ್ನು ಕಳುಹಿಸಿಲ್ಲ. ಈ ಕೃತ್ಯದ ಹಿಂದೆ ನನ್ನ ತೇಜೋವಧೆ ಮಾಡುವ ಸಂಚು ಅಡಗಿರಬಹುದು’ ಎಂದು ತಿಳಿಸಿದ್ದಾರೆ. ಅಲ್ಲದೆ, ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ಈ ನಕಲಿ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಹ್ಯಾಕರ್‌ಗಳು ತಮ್ಮ ಖಾತೆಯನ್ನು ದುರ್ಬಳಕೆ ಮಾಡಿಕೊಂಡು ಇಂತಹ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಬಳ್ಳಾರಿ ಗಲಭೆ ಕೇಸ್ | ವರ್ತಿಕಾ ಕಟಿಯಾರ್ ವರ್ಗಾವಣೆ.. ನೂತನ ಐಜಿಪಿಯಾಗಿ ಡಾ.ಹರ್ಷ, SP ಆಗಿ ಡಾ.ಸುಮನ್ ಪನ್ನೇಕರ್ ನೇಮಕ



















