ಚೆನ್ನೈ,: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಖಾಸಗಿ ಶಾಲೆಯೊಂದರ ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಮುಟ್ಟಾದ ಕಾರಣಕ್ಕೆ ಪರೀಕ್ಷೆಯನ್ನು ತರಗತಿಯ ಹೊರಗೆ ಬರೆಯುವಂತೆ ಶಿಕ್ಷಕರು ಹೇಳಿದ ಪ್ರಸಂಗ ನಡೆದಿದೆ. ಈ ವಿದ್ಯಾರ್ಥಿನಿ ದಲಿತ ಸಮುದಾಯಕ್ಕೆ ಸೇರಿದವಳಾಗಿದ್ದು, ತರಗತಿಯ ಮೆಟ್ಟಿಲುಗಳ ಮೇಲೆ ಕುಳಿತು ಪರೀಕ್ಷೆ ಬರೆಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದೆ. ಈ ಘಟನೆಯಿಂದ ಆಕ್ರೋಶ ವ್ಯಕ್ತವಾಗಿದ್ದು, ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ ಮತ್ತು ಶಾಲೆಯ ಪ್ರಧಾನ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.
1 ನಿಮಿಷ 22 ಸೆಕೆಂಡ್ಗಳ ಈ ವೀಡಿಯೊದಲ್ಲಿ ವಿದ್ಯಾರ್ಥಿನಿ ಮೆಟ್ಟಿಲುಗಳ ಮೇಲೆ ಕುಳಿತು ಪರೀಕ್ಷೆ ಬರೆಯುತ್ತಿರುವುದು ಕಂಡುಬರುತ್ತದೆ. ಅವಳ ಉತ್ತರ ಪತ್ರಿಕೆಯಲ್ಲಿ ಶಾಲೆಯ ಹೆಸರು “ಸ್ವಾಮಿ ಚಿದ್ಭವಾನಂದ ಮೆಟ್ರಿಕ್ ಹೈಯರ್ ಸೆಕೆಂಡರಿ ಸ್ಕೂಲ್, ಸೆಂಗುಟ್ಟೈಪಾಳಯಂ” ಎಂದು ಬರೆದಿದೆ. ವೀಡಿಯೊದಲ್ಲಿ, ವಿದ್ಯಾರ್ಥಿನಿ ಒಬ್ಬ ಮಹಿಳೆಯೊಂದಿಗೆ ಮಾತನಾಡುತ್ತಿದ್ದಾಳೆ, ಆ ಮಹಿಳೆ ಅವಳ ತಾಯಿ ಎಂದು ಭಾವಿಸಲಾಗಿದೆ. “ಮುಖ್ಯ ಶಿಕ್ಷಕರು ನನ್ನನ್ನು ಇಲ್ಲಿ ಕುಳಿತು ಪರೀಕ್ಷೆ ಬರೆಯಲು ಹೇಳಿದರು” ಎಂದು ಆಕೆ ಹೇಳುತ್ತಾಳೆ. ಇದು ಮೊದಲ ಬಾರಿಯಲ್ಲ, ಈ ಹಿಂದೆಯೂ ಆಕೆಯನ್ನು ಬೇರೊಂದು ಪ್ರತ್ಯೇಕ ಸ್ಥಳದಲ್ಲಿ ಪರೀಕ್ಷೆ ಬರೆಯುವಂತೆ ಹೇಳಿದ್ದರು ಎಂದು ಎಂದು ಆಕೆ ಸೇರಿಸುತ್ತಾಳೆ.
“ನೀನು ಮುಟ್ಟಾದರೆ ತರಗತಿಯೊಳಗೆ ಪರೀಕ್ಷೆ ಬರೆಯಲು ಬಿಡುವುದಿಲ್ಲವೇ?” ಎಂದು ತಾಯಿ ಪ್ರಶ್ನಿಸುವ ಧ್ವನಿ ಕೇಳಿಸುತ್ತದೆ. ಆ ದಿನವೇ ವಿದ್ಯಾರ್ಥಿನಿಗೆ ಮುಟ್ಟು ಪ್ರಾರಂಭವಾಯಿತೋ ಅಥವಾ ಹಿಂದಿನ ದಿನಗಳಲ್ಲಿ ಆಗಿತ್ತೋ ಎಂಬುದು ಸ್ಪಷ್ಟವಾಗಿಲ್ಲ.
ಶಾಲೆಯ ಸಮಜಾಯಿಷಿ
ಶಾಲೆಯ ಆಡಳಿತ ಮಂಡಳಿಯು, ವಿದ್ಯಾರ್ಥಿನಿಯ ತಾಯಿಯೇ ತನ್ನ ಮಗಳನ್ನು ಪರೀಕ್ಷೆ ಸಮಯದಲ್ಲಿ ಹೊರಗೆ ಕುಳಿತು ಬರೆಯುವಂತೆ ಮಾಡಬೇಕೆಂದು ಮನವಿ ಮಾಡಿದ್ದರು ಎಂದು ಹೇಳಿಕೊಂಡಿದೆ.
ಈ ವೀಡಿಯೊದಿಂದ ಉಂಟಾದ ಆಕ್ರೋಶದಿಂದಾಗಿ, ತಮಿಳುನಾಡು ಶಾಲಾ ಶಿಕ್ಷಣ ಇಲಾಖೆ ಔಪಚಾರಿಕ ತನಿಖೆಗೆ ಆದೇಶಿಸಿದೆ. ಶಾಲಾ ಶಿಕ್ಷಣ ಇಲಾಖೆಯು ಶಾಲೆಯ ಆಡಳಿತ ಮಂಡಳಿಯಿಂದ ವಿವರಣೆ ಕೋರಿದೆ. “ಖಾಸಗಿ ಶಾಲೆಗಳ ಶಿಕ್ಷಣ ನಿರ್ದೇಶಕ ಡಾ. ಎಂ. ಪಳನಿಸಾಮಿ ಅವರು ತನಿಖೆ ನಡೆಸುತ್ತಿದ್ದಾರೆ. ಯಾವುದೇ ತಪ್ಪು ಕಂಡುಬಂದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಒಬ್ಬ ಅಧಿಕಾರಿ NDTVಗೆ ತಿಳಿಸಿದ್ದಾರೆ.
ಶಿಕ್ಷಣ ಸಚಿವರ ಹೇಳಿಕೆ
ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಅವರು, ಮಕ್ಕಳ ವಿರುದ್ಧ ಯಾವುದೇ ರೀತಿಯ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಅವರ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ, “ಖಾಸಗಿ ಶಾಲೆಯ ವಿರುದ್ಧ ಇಲಾಖಾ ತನಿಖೆ ನಡೆಸಲಾಗಿದೆ. ಶಾಲೆಯ ಪ್ರಧಾನ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. ಮಕ್ಕಳ ಮೇಲಿನ ಯಾವುದೇ ರೀತಿಯ ದೌರ್ಜನ್ಯವನ್ನು ಸಹಿಸಲಾಗುವುದಿಲ್ಲ. ಪ್ರಿಯ ವಿದ್ಯಾರ್ಥಿನಿ, ಒಂಟಿಯಾಗಿ ಕುಳಿತುಕೊಳ್ಳಬೇಡಿ! ನಾವು ಇಲ್ಲಿದ್ದೇವೆ, ನಾವು ನಿಮ್ಮೊಂದಿಗೆ ಇರುತ್ತೇವೆ” ಎಂದು ಬರೆದಿದ್ದಾರೆ.