20ನೆಯ ಶತಮಾನದ ಆರಂಭಕಾಲದಲ್ಲಿ ಮಂಗಳೂರಿನ ಪ್ರತಿಷ್ಠಿತ ಸಂಪ್ರದಾಯಸ್ಥ ಮನೆತನದಲ್ಲಿ ಹುಟ್ಟಿ ಬೆಳೆದು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಸಮಾಜ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಹಗಲಿರುಳೆನ್ನದೆ ದುಡಿದ ಮಹಾನ್ ಮಹಿಳೆ ಕಮಲಾದೇವಿ ಚಟ್ಟೋಪಾಧ್ಯಾಯರ ಇಂಗ್ಲಿಷ್ ನಲ್ಲಿದ್ದ ಜೀವನ ಚರಿತ್ರೆ ‘The Inner Recesses Outer Spaces ಎಂಬ ಪುಸ್ತಕವನ್ನೋದಿ ಅದರಿಂದ ಸ್ಫೂರ್ತಿಗೊಂಡು ತಮ್ಮ ಮನಸ್ಸಿನಾಳಕ್ಕಿಳಿದು ಸ್ಥಿತಗೊಂಡ ಅದರ ಕೆಲವು ಆಯ್ದ ಭಾಗಗಳನ್ನು ನೆನಪಿನ ತುಣುಕುಗಳ ರೂಪದಲ್ಲಿ ಕನ್ನಡದ ಹಿರಿಯ ಲೇಖಕಿ ವೈದೇಹಿಯವರು ತಮ್ಮ ‘ನೆನಪು ನೀಲಾಂಜನ’ಎಂಬ ಕೃತಿಯಲ್ಲಿ ಅಚ್ಚುಕಟ್ಟಾಗಿ ಪೋಣಿಸಿ ಕೊಟ್ಟಿದ್ದಾರೆ. ನಿರೂಪಣೆಯನ್ನು ಉತ್ತಮ ಪುರುಷದಲ್ಲೇ ಮಾಡಿ ಕಮಲಾದೇವಿಯವರ ಆತ್ಮಕಥೆಯೇನೋ ಎಂಬಂತೆ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಮನೋಜ್ಞವಾಗಿ ನಿರೂಪಿಸಿದ್ದಾರೆ.
ಪ್ರತಿದಿನ ಸಂಜೆ ಸಭೆ, ರಾಜಕೀಯ ಚರ್ಚೆ, ಪುರಾಣವಾಚನಗಳು ನಿಯತವಾಗಿ ನಡೆಯುತ್ತಿದ್ದ ಮನೆಯಾಗಿತ್ತು ಕಮಲಾದೇವಿಯವರದು. ಗಂಡಸರೇ ನೆರೆಯುತ್ತಿದ್ದ ಸಭೆಯಲ್ಲಿ ಕಮಲಾರ ದಿಟ್ಟ ಸ್ವಭಾವದ ಅಜ್ಜಿಯೂ ಇರುತ್ತಿದ್ದರು. ಕಮಲಾಗೆ ಓದಿನ ರುಚಿಯನ್ನು ಹತ್ತಿಸಿದವರೂ ಅವರೇ. ಅಮ್ಮನೂ ತುಂಬಾ ಧೈರ್ಯಸ್ಥೆ. ಮಂಗಳೂರಿನ ಸೈಂಟ್ ಆನ್ಸ್ ಕಾನ್ವೆಂಟಿನಲ್ಲಿ ಕಮಲಳ ವಿದ್ಯಾಭ್ಯಾಸ. ಸುಶಿಕ್ಷಿತ ವಾತಾವರಣದಲ್ಲಿ ಬೆಳೆದ ಕಮಲಾ ನಾಟಕ-ಸಂಗೀತಗಳಲ್ಲೂ ಅಭಿರುಚಿ ಬೆಳೆಸಿಕೊಂಡಳು. ಪಂಡಿತಾ ರಮಾಬಾಯಿ, ಅನ್ನಿಬೆಸೆಂಟ್, ಮಾರ್ಗರೆಟ್ ಕಸಿನ್ಸ್ ಮೊದಲಾದ ಅಮ್ಮನ ಗೆಳತಿಯರು ಮಹಿಳಾ ವಿಮೋಚನೆಗಾಗಿ ಹೋರಾಟ ಆರಂಭಿಸಿದ್ದನ್ನು ಕಣ್ಣಾರೆ ಕಂಡರು. ತಮ್ಮ ಏಳನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳೆದರು. ತಂದೆಯ ಮಗಳಾಗಿದ್ದ ಕಮಲಾ ಅವರು ತೀರಿಕೊಂಡ ನಂತರ ಸೋದರಮಾವನ ಗರಡಿಯಲ್ಲಿ ರಾಜಾಜಿ-ಗೋಖಲೆಯವರಂಥ ಹಿರಿಯ ರಾಜಕೀಯದ ಮುತ್ಸದ್ದಿಗಳು ಸೇರುವ ಚಾವಡಿಯಲ್ಲಿ ಕುಳಿತು ಸ್ವಾತಂತ್ರ್ಯ ಹೋರಾಟಕ್ಕೆ ತರಬೇತಿ ಪಡೆದರು.
ಹೆಸರಾಂತ ನಯಂಪಳ್ಳಿ ಮನೆಯ ಹುಡುಗನೊಂದಿಗೆ ಕಮಲಾರ ಮದುವೆಯಾಯಿತು. ಆದರೆ ಕಣ್ಣುಮುಚ್ಚಿ ತೆರೆಯುವುದರೊಳಗೆ ಅವರು ವಿಧವೆಯೂ ಆದರು. ಆದರೆ ವಿಧವೆಯ ಬಾಳು ಕತ್ತಲಲ್ಲಿ ಕರಗಿ ಹೊಗಬಾರದೆಂದು ನಿರ್ಧರಿಸಿದ ಅವರ ಅಮ್ಮ ಅವರನ್ನು ಉನ್ನತ ಶಿಕ್ಷಣಕ್ಕಾಗಿ ಮದ್ರಾಸಿಗೆ ಕರೆದುಕೊಂಡು ಹೋದರು. ಅಲ್ಲಿ ಪ್ರತಿಭಾವಂತ ಕಲಾವಿದ-ನಾಟಕಕಾರ ಹರೀಂದ್ರನಾಥ ಚಟ್ಟೋಪಾಧ್ಯಾಯರ ಪರಿಚಯವಾಗಿ ಪರಿಚಯ ಪ್ರೀತಿಯಾಗಿ ಅವರನ್ನು ಮದುವೆಯಾದರು. ಆದರೆ ಆ ಮದುವೆಯೂ ಕಾರಣಾಂತರಗಳಿಂದ ಉಳಿಯಲಿಲ್ಲ.
ಒಂದು ದಿನ ಕಮಲಾ ಮಹರ್ಷಿ ಅರವಿಂದರನ್ನು ಭೇಟಿಯಾದರು. ‘ಹೊಸ ಎತ್ತರದ ಹೊಸತೇ ಹಾದಿಯ ಅನ್ವೇಷಣೆ’ಯಲ್ಲಿರುವ ಅವರ ವ್ಯಕ್ತಿತ್ವದಿಂದ ಆಕರ್ಷಿತರಾಗಿ ಆ ಎತ್ತರವನ್ನೇರುವ ಹಂಬಲ ಅವರದ್ದಾಯಿತು. ಅವರು ತಮ್ಮ ಆಭರಣಗಳನ್ನು ಮಾರಿ ಆ ಹಣದಿಂದ ಹಡಗು ಹತ್ತಿ ಇಂಗ್ಲೆಂಡ್ ಗೆ ಪಯಣಿಸಿದರು. ಅಲ್ಲಿ ಸಮಾಜ ವಿಜ್ಞಾನ, ಮನಶ್ಶಾಸ್ತ್ರ, ಅರ್ಥಶಾಸ್ತ್ರ, ಆರೋಗ್ಯಶಾಸ್ತ್ರಗಳನ್ನು ಕಲಿತರು. ಭಾರತಕ್ಕೆ ಮರಳಿದ ನಂತರ ಹಲವಾರು ರಾಜಕೀಯ ನಾಯಕರೊಂದಿಗೆ ಕಾಂಗ್ರೆಸ್ ಸೇರಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸಮಾಜಸೇವೆ ಮಾಡುವ ಉದ್ದೇಶದಿಂದ ಸೇವಾದಳದ ಸದಸ್ಯೆಯಾದರು. ಗಾಂಧೀಜಿಯವರ ಪ್ರಿಯ ಶಿಷ್ಯೆಯಾದರು. ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಮಾಡಲು ಹೊರಟಾಗ ಮಹಿಳೆಯರನ್ನೂ ಸೇರಿಸಿಕೊಳ್ಳಬೇಕೆಂದು ವಾದಿಸಿದರು. ಆಕೆಯ ಒತ್ತಾಯಕ್ಕೆ ಕಟ್ಟುಬಿದ್ದು ಗಾಂಧೀಜಿಯವರು ಮಹಿಳೆಯರನ್ನು ಸೇರಿಸಿಕೊಂಡರು. ಉಪ್ಪಿನ ಸತ್ಯಾಗ್ರಹದಲ್ಲಿ ಮಹಿಳೆಯರು ತೋರಿಸಿದ ಶ್ರದ್ಧೆಯನ್ನು ನೋಡಿ ಗಾಂಧೀಜಿಯವರು ತುಂಬಾ ಸಂತೋಷ ಪಟ್ಟರು.
ಸ್ವಾತಂತ್ರ್ಯ ಹೋರಾಟದಲ್ಲಿ ಎಂಥ ಕಷ್ಟ ಪರಿಸ್ಥಿತಿ ಬಂದರೂ ಕಮಲಾ ಎಲ್ಲವನ್ನೂ ಸಮರ್ಥವಾಗಿ ಎದುರಿಸಿದರು. ಪುರುಷರಂತೆ ಹಲವಾರು ಬಾರಿ ಸೆರೆಮನೆಗೂ ಹೋಗಿ ಬಂದರು. ಸೆರೆಮನೆಯಲ್ಲಿ ಎದುರಾದ ಯಾವುದೇ ಪ್ರತಿಕೂಲ ಪರಿಸ್ಥಿತಿಗೂ ಅವರು ಎದೆಗುಂದಲಿಲ್ಲ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪೋಲೀಸರ ಲಾಠಿಗೂ ಹೆದರದೆ ಅವರು ಮುನ್ನುಗ್ಗಿದರು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ದೇಶವಿಭಜನೆಯ ಕಾಲದಲ್ಲಾದ ಮತೀಯ ಕಲಹ, ಹಿಂಸೆ, ದೊಂಬಿಗಳು ಕಮಲಾರನ್ನು ಇನ್ನಿಲ್ಲದಂತೆ ನೋಯಿಸಿದವು. ಪಾಕಿಸ್ತಾನದಿಂದ ಬಲಾತ್ಕಾರವಾಗಿ ಎಳೆದು ತಂದ ಹೆಣ್ಣುಮಕ್ಕಳಿಗೆ ಭಾರತದಲ್ಲಿ ಪುನರ್ವಸತಿ ಕಲ್ಪಿಸಿ ಕೊಡಲು ಅವರು ತಮ್ಮಿಂದಾದ ಪ್ರಯತ್ನಗಳನ್ನು ಮಾಡಿದರು. ಅದಕ್ಕಾಗಿ ಗಾಂಧೀಜಿಯವರೊಡನೆ ಮಾತನಾಡಿ ಭೂಮಿಯನ್ನೊದಗಿಸಲು ಸರಕಾರಕ್ಕೆ ಶಿಫಾರಸು ಮಾಡಲು ಕೇಳಿಕೊಂಡರು. ನೆಹರೂರವರನ್ನು ಭೇಟಿಯಾದರು. ಮೊದಲಿಗೆ ‘ಇವೆಲ್ಲ ಬರೀ ಸೋಷ ಲಿಸ್ಟರ ರಮ್ಯಕಲ್ಪನೆಗಳು ‘ ಎಂದು ತಮಾಷೆ ಮಾಡಿದ ನೆಹರೂ ಕೊನೆಗೆ ಕಮಲಾ ಯಶಸ್ಸು ಸಾಧಿಸಿದಾಗ ಅವರ ಸಂಕಲ್ಪ ಶಕ್ತಿಯನ್ನು ನೋಡಿ ಬೆರಗಾದರು.
ದುಂಡುಮೇಜಿನ ಪರಿಷತ್ತು ಮುಗಿದ ನಂತರ ದೇಶದಲ್ಲಿ ಎಲ್ಲೆಂದರಲ್ಲಿ ಕಾನೂನು ಸುವ್ಯವಸ್ಥೆಯ ಹೆಸರಲ್ಲಿ ಜನರ ಬಂಧನ ಅರಂಭವಾಯಿತು. ಕಮಲಾ ಅವರೂ ಬಂಧನಕ್ಕೊಳಗಾದರು. ಲಾಕಪ್ ಅಂತೂ ಬಂಧಿತರಿಂದ ತುಂಬಿ ಹೋಗಿತ್ತು. ತನಿಖೆ ಶುರುವಾದಾಗ ಕಮಲಾ ದಿಟ್ಟತನದಿಂದ ಉತ್ತರಿಸಿದರು. ಜೈಲಿನ ಅವ್ಯವಸ್ಥೆಯ ವಿರುದ್ಧ ದನಿಯೆತ್ತಿದರು. ಕಮಲಾರ ನಾಯಕತ್ವದಲ್ಲಿ ಪ್ರತಿಭಟನೆ ಆರಂಭವಾಯಿತು. ಜೈಲಿನಲ್ಲಿ ಅವರಿಗೆ ಜಾಂಡಿಸ್ ಆದಾಗ ಅವರು ಅಲ್ಲೊಂದು ಪುಟ್ಟ ಆಸ್ಪತ್ರೆಯನ್ನೇ ತೆರೆದರು. ಹಿಂದೆ ಪಂಡಿತಾ ರಮಾಬಾಯಿ ಮತ್ತು ಅವರ ಮಗಳು ಮನೋರಮಾ ಜತೆಗೆ ಕೆಲಸ ಮಾಡಿದ ಅನುಭವವು ಅವರಿಗೆ ಇಲ್ಲಿ ಪ್ರಯೋಜನಕ್ಕೆ ಬಂತು. ಆಸ್ಪತ್ರೆ ತೆರೆಯುವ ಮೂಲಕ ಎಷ್ಟೋ ಮಂದಿ ಮಹಿಳೆಯರನ್ನು ಅವರು ಅನಾರೋಗ್ಯದಿಂದ ರಕ್ಷಿಸಿದರು.
ಸೆರೆಮನೆಯಲ್ಲೇ ಇದ್ದುಕೊಂಡು ಜಯಪ್ರಕಾಶ್ ನಾರಾಯಣ್ ಮೊದಲಾದವರು ಕಟ್ಟಿದ ಸೋಷಲಿಸ್ಟ್ ಪಾರ್ಟಿಗೆ ಕಮಲಾ ಸೇರಿಕೊಂಡರು. ಸಾಮಾಜಿಕ ಮತ್ತು ಆರ್ಥಿಕ ತಂಡಗಳು ಸಮುದಾಯದ ಸೇವೆಯಲ್ಲಿ ಪೂರ್ತಿಯಾಗಿ ಪಾಲ್ಗೊಳ್ಳುವಂತೆ ತಳಮಟ್ಟದಿಂದ ಕೆಲಸ ಮಾಡಲು ಅವರು ಮಂಗಳೂರಿಗೆ ಬಂದು ನೆಲೆಸಿದರು. ಗೇರು ಸಂಸ್ಕರಣಾ ಕಾರ್ಖಾನೆಗಳಲ್ಲಿ ಶೋಷಣೆಗೊಳಗಾಗಿದ್ದ ಕಾರ್ಮಿಕರ -ಮುಖ್ಯವಾಗಿ ಮಹಿಳಾ ಕಾರ್ಮಿಕರ – ಪರವಾಗಿ ಯೂನಿಯನ್ ಕಟ್ಟಿ ನ್ಯಾಯ ಒದಗಿಸಲು ಅವರು ಹೆಣಗಾಡಿದರು.
ಕೊನೆಗೆ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ-ಸನ್ಮಾನಗಳು ಒಲಿದು ಬಂದಾಗ ವಿನೀತರಾಗಿ ತಾವು ಇನ್ನೂ ಮಾಡಬೇಕಾದ ಕೆಲಸಗಳ ಬಗ್ಗೆ ಚಿಂತಿಸಿದರು.
ಗಾಂಧಿಜಿ ಮತ್ತು ಕಸ್ತೂರ್ಬಾ ಅವರ ಅನುರೂಪ ದಾಂಪತ್ಯದ ಬಗ್ಗೆ ಕಮಲಾ ಅವರಿಗೆ ಅಪಾರ ಮೆಚ್ಚುಗೆಯಿತ್ತು. ಗಾಂಧಿಜಿಯವರು ಸದಾ ಅವರ ಆದರ್ಶವಾಗಿದ್ದರು. ತಾವು ಮಾಡಿದ ಸಾಧನೆಗಳು ಅಥವಾ ದೊರೆತ ಹೆಸರು, ಕೀರ್ತೀ, ಪ್ರಶಸ್ತಿ, ಪುರಸ್ಕಾರಗಳು ಅವರನ್ನು ಸ್ವಲ್ಪವೂ ವಿಚಲಿತರನ್ನಾಗಿಸಲಿಲ್ಲ.ಒ
‘ನೆನಪು ನೀಲಾಂಜನ’ ಕಮಲಾದೇವಿಯವರಿಗೆ ಅರ್ಪಿಸಿದ ಒಂದು ನೆನಪಿನ ಕಾಣೆಕೆಯಂತಿದೆ. ಇಲ್ಲಿರುವ ವಿವರಗಳಿಗಿಂತಲೂ ವೈದೇಹಿಯವರು ಕೃತಿಯೊಳಗೆ ತುಂಬಿರುವ ಭಾವದ ಹೃದಯಸ್ಪರ್ಶಿ ಗುಣ ನಮ್ಮ ಮನಸ್ಸನ್ನು ತಟ್ಟುತ್ತದೆ . ಕೆಲವೊಮ್ಮೆ ವೈದೇಹಿಯವರ ಬರವಣಿಗೆಯ ಶೈಲಿಯೇ ಹಾಗೆ. ಗತ್ತು- ಗಾಂಭೀರ್ಯ-ಔಪಚಾರಿಕತೆಗಳನ್ನು ಬದಿಗಿಟ್ಟು ಓದುಗರೊಂದಿಗೆ ಆಪ್ತವಾಗಿ ಹತ್ತಿರ ಬಂದು ಮೆಲುದನಿಯಲ್ಲಿ ಮಾತನಾಡುವಂತೆ ಅವರು ಬರೆಯುತ್ತಾರೆ. ಅಲ್ಲಿ ಮುಗ್ಧ ಪ್ರಶ್ನೆಗಳಿವೆ, ಪಿಸುಮಾತುಗಳೂ ಇವೆ. ಸಾಂದರ್ಭಿಕವಾದ ಉದ್ಗಾರಗಳೂ ಇವೆ. ಅದ್ದರಿಂದಲೇ ಇಡೀ ಪುಸ್ತಕ ನವಿರಾಗಿ ಓದಿಸಿಕೊಂಡು ಹೋಗುತ್ತ ಕಮಲಾದೇವಿಯವರ ಆದರ್ಶ ವ್ಯಕ್ತಿತ್ವವನ್ನು ಸರಳ ಮಾತುಗಳಲ್ಲಿ ಕಟ್ಟಿ ಕೊಡುತ್ತದೆ.

-ಡಾ. ಪಾರ್ವತಿ ಜಿ.ಐತಾಳ್
ಸಾಹಿತಿಗಳು, ಖ್ಯಾತ ಅನುವಾದಕಿ
ಕೃತಿಯ ಹೆಸರು : ನೆನಪು ನೀಲಾಂಜನ
ಲೇಖಕಿ : ವೈದೇಹಿ
ಪ್ರ : ಅಕ್ಷರ ಪ್ರಕಾಶನ, ಸಾಗರ
ಪ್ರ.ವ : 2025