ದೇಶ ಕಂಡ ಪ್ರಮುಖ ಆರ್ಥಿಕ ಸುಧಾರಕ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇಹಲೋಕ ತ್ಯಜಿಸಿದ್ದಾರೆ. ದೇಶವೇ ಅವರ ಸಾವಿಗೆ ಕಂಪನಿ ಮಿಡಿದಿದೆ. ಇನ್ನು ವಾಜಪೇಯಿ ಅವರಂತೆ ಸಿಂಗ್ ಅವರಿಗೂ ಸ್ಮಾರಕ ನಿರ್ಮಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಕಾಂಗ್ರೆಸ್ ಮನವಿ ಮಾಡಿದೆ. ಇದರ ಬೆನ್ನಲ್ಲೇ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠ ಮುಖರ್ಜಿ ಅವರು ತಂದೆಯ ಸ್ಮಾರಕ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧವೇ ಹರಿಹಾಯ್ದಿದ್ದಾರೆ. ಇದು ಈಗ ಚರ್ಚೆಗೂ ಗ್ರಾಸವಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ಜೀವನವಿಡೀ ನಿಷ್ಠರಾಗಿದ್ದ ಪ್ರಣಬ್ ಮುಖರ್ಜಿ ಅವರು 2020ರಲ್ಲಿ ನಿಧನರಾದಾಗ ಪಕ್ಷವು ಅವರಿಗೆ ಸರಿಯಾಗಿ ಗೌರವ ನೀಡಲಿಲ್ಲ ಎಂದು ಶರ್ಮಿಷ್ಠ ಮುಖರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ತಂದೆ ತೀರಿಕೊಂಡಾಗ ಕಾಂಗ್ರೆಸ್ ನಡೆದುಕೊಂಡ ರೀತಿ ನೆನೆದರೆ ಈಗಲೂ ಬೇಸರವಾಗುತ್ತದೆ. ಕನಿಷ್ಠಪಕ್ಷ ಶ್ರದ್ಧಾಂಜಲಿ ಸಲ್ಲಿಸಲು ಕೂಡ ಕಾಂಗ್ರೆಸ್ ಮನಸ್ಸು ಮಾಡಲಿಲ್ಲ ಎಂಬುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಶರ್ಮಿಷ್ಠ ಮುಖರ್ಜಿ ಅವರು ಬಹಿರಂಗವಾಗಿಯೇ ಟೀಕೆಗಳನ್ನು ಮಾಡಿದ್ದಾರೆ. ನನ್ನ ತಂದೆ ನಿಧನರಾದಾಗ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಸಲಿಲ್ಲ. ಕೇಳಿದರೆ, ರಾಷ್ಟ್ರಪತಿ ಆಗಿದ್ದವರಿಗೆ ಸಿಡಬ್ಲ್ಯೂಸಿ ಸಭೆ ಕರೆದು, ಸಂತಾಪ ಸೂಚಿಸುವ ಶಿಷ್ಟಾಚಾರ ಇಲ್ಲ ಎಂಬುದಾಗಿ ಹೇಳಿದರು. ಆದರೆ, ಕಾಂಗ್ರೆಸ್ ನಲ್ಲಿ ಇಂತಹ ನಿಯಮವೇ ಇಲ್ಲ ಎಂಬುದಾಗಿ ನನಗೆ ಬಳಿಕ ತಿಳಿಯಿತು ಎಂದು ಮುಖರ್ಜಿ ಪುತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮನಮೋಹನ್ ಸಿಂಗ್ ಅವರಿಗೆ ಸ್ಮಾರಕ ನಿರ್ಮಿಸಲು ಯಾವುದೇ ಅಡ್ಡಿ ಇಲ್ಲ ಎಂದು ಕೂಡ ಶರ್ಮಿಷ್ಠ ಹೇಳಿದ್ದಾರೆ. ಮನಮೋಹನ್ ಸಿಂಗ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂಬುದು ನನ್ನ ತಂದೆಯವರ ಅಭಿಪ್ರಾಯವಾಗಿತ್ತು. ಖಂಡಿತವಾಗಿಯೂ ಮನಮೋಹನ್ ಸಿಂಗ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು. ಅವರ ಸ್ಮಾರಕ ನಿರ್ಮಾಣವಾಗಬೇಕು ಎಂಬುದಕ್ಕೆ ನನ್ನ ಬೆಂಬಲವೂ ಇದೆ. ನನ್ನ ತಕರಾರು ಏನಿದ್ದರೂ ಕಾಂಗ್ರೆಸ್ ಹೈಕಮಾಂಡ್ ಜತೆ ಮಾತ್ರ ಎಂದು ಕೂಡ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಶ್ರೇಷ್ಠತೆಯ ಸಮರದಲ್ಲಿ ತಮ್ಮವರನ್ನು ಹೊತ್ತು ತರುತ್ತಾ ಪಕ್ಷದ ಹುಳುಕನ್ನು ಎತ್ತಿ ತೋರಿಸುತ್ತಾ ನೇರಾ ನೇರಾ ಟೀಕೆ- ಟಿಪ್ಪಣಿ ಮಾಡುತ್ತಿರುವುದು ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ.