ನವದೆಹಲಿ: ನಟಿ ಕರಿಷ್ಮಾ ಕಪೂರ್ ಅವರ ಪುತ್ರಿಯ ವಿಶ್ವವಿದ್ಯಾಲಯದ ಶುಲ್ಕ ಪಾವತಿಸದೇ ಎರಡು ತಿಂಗಳಾಯಿತು. 2 ತಿಂಗಳ ಶುಲ್ಕವನ್ನು ಇನ್ನೂ ಕರಿಷ್ಮಾರ ಮಾಜಿ ಪತಿ, ದಿವಂಗತ ಉದ್ಯಮಿ ಸಂಜಯ್ ಕಪೂರ್ ಅವರ ಎಸ್ಟೇಟ್ ಪಾವತಿಸಿಲ್ಲ ಎಂದು ಕರಿಷ್ಮಾ ಅವರು ದೆಹಲಿ ಹೈಕೋರ್ಟ್‌ಗೆ ದೂರು ನೀಡಿದ್ದಾರೆ. ವಿಚಾರಣೆ ವೇಳೆ, ಕರಿಷ್ಮಾ ಅವರ ದೂರಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, “ಈ ಮೆಲೋಡ್ರಾಮಾ”ಗಳನ್ನೆಲ್ಲ ನಿಲ್ಲಿಸಿ ಎಂದು ಕಿವಿಹಿಂಡಿದೆ. ಇಂತಹ ವಿಷಯಗಳನ್ನು ನ್ಯಾಯಾಲಯಕ್ಕೆ ತಂದು “ನಾಟಕೀಯ” ಸನ್ನಿವೇಶ ಸೃಷ್ಟಿಸದಂತೆ ನ್ಯಾಯಾಲಯವು ಎರಡೂ ಕಡೆಯವರಿಗೆ ಖಡಕ್ ಎಚ್ಚರಿಕೆ ನೀಡಿದೆ.
ಶುಲ್ಕ ಪಾವತಿ ವಿವಾದ
ಉದ್ಯಮಿ ಸಂಜಯ್ ಕಪೂರ್ ಅವರ 30,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಕರಿಷ್ಮಾ ಅವರ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಪರವಾಗಿ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ವಾದ ಮಂಡಿಸುತ್ತಿದ್ದಾರೆ. “ಅರ್ಜಿ ಸಲ್ಲಿಸಿದ ನಂತರ, ದಿವಂಗತ ಉದ್ಯಮಿಯ ಪತ್ನಿ ಪ್ರಿಯಾ ಕಪೂರ್ ಅವರು ಅಮೆರಿಕದಲ್ಲಿ ಓದುತ್ತಿರುವ ಸಮೈರಾ ಅವರ ಎರಡು ತಿಂಗಳ ಶಿಕ್ಷಣ ವೆಚ್ಚವನ್ನು ಬಿಡುಗಡೆ ಮಾಡಿಲ್ಲ. ಇದು ಪ್ರಸ್ತುತ ಎಸ್ಟೇಟ್ ಅನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ,” ಎಂದು ಜೇಠ್ಮಲಾನಿ ವಾದಿಸಿದರು.
ಆದರೆ, ಪ್ರಿಯಾ ಕಪೂರ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ನಾಯರ್, ಈ ಆರೋಪವನ್ನು “ಕಟ್ಟುಕಥೆ ಮತ್ತು ಆಧಾರರಹಿತ” ಎಂದು ತಳ್ಳಿಹಾಕಿದರು. “ಮಕ್ಕಳ ಅಗತ್ಯಗಳನ್ನು ಪ್ರಿಯಾ ಅವರು ನಿರಂತರವಾಗಿ ನೋಡಿಕೊಳ್ಳುತ್ತಿದ್ದಾರೆ ಮತ್ತು ಶುಲ್ಕವನ್ನು ಈಗಾಗಲೇ ಪಾವತಿಸಲಾಗಿದೆ. ಮಾಧ್ಯಮಗಳಲ್ಲಿ ವರದಿಯಾಗುವಂತೆ ಮಾಡುವುದೇ ಈ ಆರೋಪದ ಉದ್ದೇಶ,” ಎಂದು ಅವರು ಪ್ರತಿವಾದಿಸಿದರು.

ನ್ಯಾಯಾಲಯದ ಖಡಕ್ ಎಚ್ಚರಿಕೆ
ಈ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ, ಇಂತಹ ಸಣ್ಣಪುಟ್ಟ ವಿಷಯಗಳು ನ್ಯಾಯಾಲಯಕ್ಕೆ ಬರಬಾರದು ಎಂದು ಸ್ಪಷ್ಟಪಡಿಸಿತು. “ನಾನು ಈ ವಿಷಯದ ಮೇಲೆ 30 ಸೆಕೆಂಡ್‌ಗಳಿಗಿಂತ ಹೆಚ್ಚು ಸಮಯ ಕಳೆಯಲು ಇಚ್ಛಿಸುವುದಿಲ್ಲ. ಈ ವಿಚಾರ ಮತ್ತೆ ನನ್ನ ನ್ಯಾಯಾಲಯಕ್ಕೆ ಬರಬಾರದು. ಈ ವಿಚಾರಣೆ ನಾಟಕೀಯವಾಗಿರಲು ನನಗೆ ಇಷ್ಟವಿಲ್ಲ. ಈ ಜವಾಬ್ದಾರಿಯನ್ನು ನಾನು ನಿಮ್ಮ ಮೇಲೆ (ಪ್ರಿಯಾ ಕಪೂರ್ ಅವರ ವಕೀಲೆ) ಹೊರಿಸುತ್ತೇನೆ,” ಎಂದು ನ್ಯಾಯಾಲಯ ಖಡಕ್ಕಾಗಿ ಹೇಳಿತು.
ನಕಲಿ ವಿಲ್‌ನ ಆರೋಪ
ಈ ಪ್ರಕರಣದ ಮೂಲದಲ್ಲಿ, ಜೂನ್‌ನಲ್ಲಿ ಲಂಡನ್‌ನಲ್ಲಿ ಪೋಲೋ ಪಂದ್ಯದ ವೇಳೆ ನಿಧನರಾದ ಸಂಜಯ್ ಕಪೂರ್ ಅವರ ವಿಲ್ ಅನ್ನು ಪ್ರಿಯಾ ಕಪೂರ್ ನಕಲಿಯಾಗಿ ಸೃಷ್ಟಿಸಿದ್ದಾರೆ ಎಂಬ ಆರೋಪವಿದೆ. ತಮ್ಮ ತಂದೆಯ ಸಂಪೂರ್ಣ ಆಸ್ತಿಯ ಮೇಲೆ ಹಿಡಿತ ಸಾಧಿಸಲು ಪ್ರಿಯಾ ಯತ್ನಿಸುತ್ತಿದ್ದಾರೆ ಎಂದು ಮಕ್ಕಳು ಆರೋಪಿಸಿದ್ದಾರೆ. ನ್ಯಾಯಾಲಯದ ಮುಂದೆ ಪ್ರಿಯಾ ಕಪೂರ್ ಅವರನ್ನು “ಸಿಂಡ್ರೆಲಾ ಮಲತಾಯಿ” ಎಂದು ಕರೆದ ಮಕ್ಕಳು, ತಮ್ಮನ್ನು ತಂದೆಯ ಆಸ್ತಿಯಿಂದ ದೂರವಿಡುತ್ತಿದ್ದಾರೆ ಎಂದು ದೂರಿದ್ದಾರೆ. ವಿಲ್‌ನಲ್ಲಿನ ಸಹಿಗಳು, ದಿನಾಂಕಗಳು ಮತ್ತು ಮೆಟಾಡೇಟಾದಲ್ಲಿನ ವ್ಯತ್ಯಾಸಗಳನ್ನು ಜೇಠ್ಮಲಾನಿ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಆದರೆ ಇವೆಲ್ಲವೂ ವಿಲ್ ಪ್ರಕರಣಗಳಲ್ಲಿ ಸಾಮಾನ್ಯವಾದ ಆಕ್ಷೇಪಣೆಗಳು ಎಂದು ರಾಜೀವ್ ನಾಯರ್ ವಾದಿಸಿದರು.
ಈ ಹಿಂದೆ, ಸಂಜಯ್ ಕಪೂರ್ ಅವರ ಆಸ್ತಿಗಳ ಪಟ್ಟಿಯನ್ನು ನೀಡುವಂತೆ ನ್ಯಾಯಾಲಯವು ಪ್ರಿಯಾ ಕಪೂರ್ ಅವರಿಗೆ ಸೂಚಿಸಿತ್ತು. ಕರಿಷ್ಮಾ ಅವರ ಮಕ್ಕಳು ಈಗಾಗಲೇ ಕುಟುಂಬ ಟ್ರಸ್ಟ್‌ನಿಂದ 1,900 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಪ್ರಿಯಾ ಕಪೂರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 13 ವರ್ಷಗಳ ದಾಂಪತ್ಯದ ನಂತರ 2016ರಲ್ಲಿ ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ ವಿಚ್ಛೇದನ ಪಡೆದಿದ್ದರು. ನಂತರ ಸಂಜಯ್ ಕಪೂರ್, ಪ್ರಿಯಾ ಅವರನ್ನು ವಿವಾಹವಾಗಿದ್ದರು.
ಇದನ್ನೂ ಓದಿ: ಶ್ರೀನಗರ ಠಾಣೆಯಲ್ಲಿ ಸ್ಪೋಟ.. ಇದು ಆಕಸ್ಮಿಕ ಘಟನೆ, ಭಯೋತ್ಪಾದಕ ಪಿತೂರಿ ಅಲ್ಲ | ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ



















