ಮಣಿಪಾಲ: ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಏಕ ವಿನ್ಯಾಸ ನಕ್ಷೆ ಹಾಗೂ ನಮೂನೆ 9/11ನ್ನು ಹೊಸ ಅಧಿಸೂಚನೆಯ ಪ್ರಕಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಾರ್ವಜನಿಕರು ಪಡೆಯಲು ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಕರಾವಳಿ ಜಿಲ್ಲೆಗಳಿಗೆ ಕೆಲವು ವಿನಾಯಿತಿ ಅಗತ್ಯವಿದ್ದು ಆ ನಿಟ್ಟಿನಲ್ಲಿ ರಾಜ್ಯದ ಉನ್ನತ ಅಧಿಕಾರಿಗಳು ಹಾಗೂ ಸಚಿವರನ್ನು ಭೇಟಿ ಮಾಡಿ ಚರ್ಚಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಏಕ ನಿವೇಶನ ನಕ್ಷೆ ಹಾಗೂ ನಮೂನೆ 9/11 ರಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗೆಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏಕ ವಿನ್ಯಾಸ ನಕ್ಷೆ ಹಾಗೂ ನಮೂನೆ 9/11 ಪಡೆಯಲು ಜನಸಾಮಾನ್ಯರು ಸಂಬಂಧಿಸಿದ ಇಲಾಖೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದು, ತಿಂಗಳುಗಟ್ಟಲೇ ಸುತ್ತಾಡಿದರೂ ವಿಲೇವಾರಿ ಆಗುತ್ತಿಲ್ಲ. ಹೊಸ ಅಧಿಸೂಚನೆಯ ಪ್ರಕಾರ ಎಲ್ಲ ಅರ್ಜಿಗಳನ್ನು ಅನುಮೋದನೆ ನೀಡಲೂ ಕಷ್ಟಸಾಧ್ಯ ಎನಿಸಿದೆ. ಇದಕ್ಕೆ ಸರಕಾರ ವಿಶೇಷ ಪ್ರಕರಣದಡಿ ಕೆಲವು ವಿನಾಯಿತಿಗಳನ್ನು ಕರಾವಳಿ ಜಿಲ್ಲೆಗಳಿಗೆ ನೀಡಬೇಕಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಸರ್ಕಾರದ ಗಮನಕ್ಕೆ ತರಲಾಗುವುದೆಂದು ಹೇಳಿದರು.



















