ಬೆಂಗಳೂರು: ದಡಾರ-ರುಬೆಲ್ಲಾ ಖಾಯಿಲೆಯಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಸಾರ್ವತ್ರಿಕ ಕಾರ್ಯಕ್ರಮದಡಿ 9 ರಿಂದ 11 ತಿಂಗಳ ವಯಸ್ಸಿನ ಮಕ್ಕಳಿಗೆ ಮೊದಲನೇ ಡೋಸ್ ಹಾಗೂ 16 ರಿಂದ 24 ತಿಂಗಳ ವಯಸ್ಸಿನ ಮಕ್ಕಳಿಗೆ ಎರಡನೇ ಡೋಸ್ ದಡಾರ-ರುಬೆಲ್ಲಾ ಲಸಿಕಾ ಅಭಿಯಾನವನ್ನು ಜನವರಿ 31ರವರೆಗೆ 10 ದಿನಗಳ ಕಾಲ ನಡೆಸಲಾಗುತ್ತದೆ ಎಂದು ಜಿಬಿಎ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತ ಸರ್ಕಾರವು 2026ರ ಅಂತ್ಯದೊಳಗೆ ದಡಾರ-ರುಬೆಲ್ಲಾ ಮತ್ತು ರುಬೆಲ್ಲಾ ರೋಗಗಳ ಸಂಪೂರ್ಣ ನಿರ್ಮೂಲನೆಗೆ ಬದ್ಧವಾಗಿದ್ದು. ಈ ಮಹತ್ವದ ಗುರಿ ಸಾಧನೆಯಲ್ಲಿ ರಾಜ್ಯದ ಪಾತ್ರ ಅತ್ಯಂತ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ದಡಾರ-ರುಬೆಲ್ಲಾ ನಿರ್ಮೂಲನಾ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ವಿಶೇಷ ಗಮನಹರಿಸಿದೆ.

ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ದಡಾರ ರೋಗವು ವ್ಯಾಪಕವಾಗಿ ಹರಡುವ ಸಾಧ್ಯತೆ ಇರುವುದರಿಂದ ಮತ್ತು ಜನವರಿಯಿಂದ ಮಾರ್ಚ್ ವರೆಗೆ ಹೆಚ್ಚಿನ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇರುವುದನ್ನು ಗಮನಿಸಿ, ದಢಾರ-ರುಬೆಲ್ಲಾ ಪಾಕ್ಷಿಕ ಲಸಿಕಾ ಅಭಿಯಾನವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಐದು ಪಾಲಿಕೆಗಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಔಟ್ ರೀಚ್ ಪ್ರದೇಶಗಳಲ್ಲಿ ದಿನಾಂಕ ಜ,19 ರಿಂದಜ. 31 ರವರೆಗೆ ಸೆಷನ್‌ಗಳ ಮೂಲಕ ಹಮ್ಮಿಕೊಳ್ಳಲಾಗಿದೆ.
5 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಗಳಿಂದ ಈವರೆಗೆ ಲಸಿಕೆ ಪಡೆಯಲು ವಿಳಂಬವಾಗಿದ್ದಲ್ಲಿ ಅಥವಾ ಲಸಿಕೆ ಪಡೆಯದೇ ಇದ್ದಲ್ಲಿ, ಪೋಷಕರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ಜಿ.ಬಿ.ಎ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ ಬರುವ 145 ಯೋಜನಾ ಘಟಕಗಳ ದಡಾರ-ರುಬೆಲ್ಲಾ ಪಾಕ್ಷಿಕ ಲಸಿಕಾ ಕಾರ್ಯಕ್ರಮದ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ದಡಾರ-ರುಬೆಲ್ಲಾ ವಿಶೇಷ ಪಾಕ್ಷಿಕ ಲಸಿಕಾ ಅಭಿಯಾನದಲ್ಲಿ ಒಟ್ಟು 1114 ಲಸಿಕಾ ಕೇಂದ್ರಗಳನ್ನು 3005 ವಲಸೆ ತಾಣಗಳಲ್ಲಿ ಯೋಜಿಸಲಾಗಿದ್ದು, 267 ಮಕ್ಕಳಿಗೆ MR-1 ಲಸಿಕೆ ಮತ್ತು 246 ಮಕ್ಕಳಿಗೆ MR2 ಲಸಿಕೆ ಹಾಗೂ 178 ಮಕ್ಕಳಿಗೆ ಪೆಂಟಾ-1 ಲಸಿಕೆ ಮತ್ತು 183 ಮಕ್ಕಳಿಗೆ DPT 2 ನೇ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುವುದು.
ಈ ಅಭಿಯಾನವು 1040 ಹೆಚ್ಚಿನ ಅಪಾಯದ ಪ್ರದೇಶಗಳಾದ ಕೊಳೆಗೇರಿಗಳು ಮತ್ತು ದಡಾರ ಪ್ರಕರಣವಿರುವ ಪ್ರದೇಶಗಳನ್ನು ಒಳಗೊಂಡಿದ್ದು, 1493 ಮಕ್ಕಳಿಗೆ MR1 ಲಸಿಕೆ ಮತ್ತು 1512 ಮಕ್ಕಳಿಗೆ MR2 ಡೋಸ್ ಲಸಿಕೆ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು ಅಥವಾ ಆರೋಗ್ಯ ಸಹಾಯಕಿಯರನ್ನು ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಡಿಜಿಪಿ ರಾಸಲೀಲೆ ಪ್ರಕರಣ | ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸ್ನೇಹಮಯಿ ಕೃಷ್ಣ ಮನವಿ



















