ದೀನ ದಲಿತರ ಪರ ಗಟ್ಟಿ ಧ್ವನಿಯಾಗಿ ಸದಾ ಮುಂಚುಣಿಯಲ್ಲಿ ನಿಲ್ಲುವ ಪ್ರಬಲ ಮುಖಂಡ ಡಾ. ಎಂ. ವೆಂಕಟಸ್ವಾಮಿ ಎಪ್ಪತ್ತರ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮವನ್ನು “ಸಮತಾ ಸೈನಿಕ ದಳ” ಮತ್ತು “ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ”ದವರು ಸದಾಶಿವ ನಗರದ “ನಾಗಸೇನಾ ಬುದ್ಧ ವಿಹಾರ” ಮೈದಾನದಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು.
ಜೂನ್ ಐದು (ನಾಳೆ) ವಿಶ್ವ ಪರಿಸರ ದಿನವನ್ನು ನೆನೆದು, ತಮ್ಮ ಎಪ್ಪತ್ತರ ಸಂಭ್ರಮವನ್ನು ಎಪ್ಪತ್ತು ಸಸಿಗಳನ್ನು ನೆಡುವುದರ ಮೂಲಕ ತಮ್ಮ ಪರಿಸರ ಕಾಳಜಿಯನ್ನು ಎತ್ತಿ ಹಿಡಿದು, “ಪರಿವರ್ತನಾ ಸಮಾವೇಶ”ಕ್ಕೆ ಹಸಿರು ನಿಶಾನೆ ಕೊಟ್ಟರು.

ಮಾತೆ ಬೌದ್ಧ ಬಿಕ್ಕುಣಿಯರು ಮತ್ತು ಗಣ್ಯರು ಸೇರಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರರಿಗೆ ಗೌರವ ಪೂರ್ವಕವಾಗಿ, ಜ್ಯೋತಿ ಬೆಳಗುವ ಮೂಲಕ ಸಮಾರಂಭಕ್ಕೆ ಚಾಲನೆ ಸಿಕ್ಕಿತು. ಮೊದಲಿಗೆ ಆರ್.ಪಿ.ಐ. ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳಾದ “ಜಿ.ಸಿ. ವೆಂಕಟರಮಣಪ್ಪ”ನವರು ಅಂಬೇಡ್ಕರರ ಪ್ರತಿಜ್ಞಾ ವಿಧಿ ಬೋಧಿಸುವುದರ ಮೂಲಕ ಕಾರ್ಯಕ್ರಮ ಕಳೆಕಟ್ಟಿತು.

ಮುಂದೆ ಡಾ. ವೆಂಕಟಸ್ವಾಮಿಯವರು, ವೇದಿಕೆಯ ಗಣ್ಯರಿಂದ, ಪ್ರತಿ ವರ್ಷದಂತೆ ಈ ಬಾರಿಯೂ ತಾವು ಸಂಗ್ರಹಿಸಿ ಬರೆದ “ಸಾಮಾಜಿಕ ನ್ಯಾಯ ಪ್ರವರ್ತಕ ರಾಜಶ್ರೀ ಕೃಷ್ಣರಾಜ ಒಡೆಯರ್” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಉಚಿತವಾಗಿ ಹಂಚಿದರು.
ಈ ನಡುವೆ ಸಹಕಾರ ಮಹಾ ಮಂಡಳದ ಕಾರ್ಯದರ್ಶಿಗಳಾದ “ಎನ್. ಲಕ್ಷ್ಮೀಪತಯ್ಯ”ನವರು, ಡಾ.ಎಂ. ವೆಂಕಟಸ್ವಾಮಿಯವರ ಮೇಲಿನ ಗೌರವಕ್ಕೆ, ತಾವು ಅವರ ಮೇಲೆ ರಚಿಸಿದ ಗೀತೆಯನ್ನು, ಗಾಯಕ “ನೆಲಸೊಗಡು ಲಕ್ಷ್ಮಣ್” ಅವರಿಂದ ಸಮಾವೇಶದಲ್ಲಿ ಹಾಡಿಸಿದರು. ಆ ಮೂಲಕ ಈ ನಾಡುಕಂಡ ಹೆಮ್ಮೆಯ ಹಿರಿಯ ಹೋರಾಟಗಾರನಿಗೆ ಗೀತನಮನ ಸಲ್ಲಿಸಿದರು

ಕಳೆದ 30 ವರ್ಷಗಳಿಂದ ಸತತವಾಗಿ ತನ್ನ ಜನ್ಮದಿನದದಂದು, ವಿಶೇಷವಾಗಿ ಸಮಾಜ ಪರಿವರ್ತನಾ ಪ್ರವರ್ತಕ ‘ರಾಜಶ್ರೀ ಕೃಷ್ಣರಾಜ ಒಡೆಯರ್’ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿರುವ ವೆಂಕಟಸ್ವಾಮಿಯವರು, ಈ ನಾಡು ಕಂಡ ಒಬ್ಬ ಗೌರವಾನ್ವಿತರನ್ನು ಆಯ್ಕೆ ಮಾಡಿ “ರಾಜಶ್ರೀ ಕೃಷ್ಣರಾಜ ಒಡೆಯರ್ ಪ್ರಶಸ್ತಿ” ಪ್ರಧಾನ ಮಾಡುತ್ತಾ ಬಂದಿದ್ದನ್ನು ಈ ವರ್ಷವೂ ಮುಂದುವರೆಸಿದರು.ಅದರಂತೆ, ಈ ಬಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ರವರ 140ನೇ ಜಯಂತಿಯ ಪ್ರಯುಕ್ತ “ಮಾನವ ಬಂಧುತ್ವದ ಸೇವಾ ಸಾಧಕಿ ಶ್ರೀಮತಿ ಇಂದಿರಾ ಕೃಷ್ಣಪ್ಪ” ಅವರಿಗೆ ಗಣ್ಯರೊಡಗೂಡಿ “ರಾಜಶ್ರೀ ಕೃಷ್ಣರಾಜ ಒಡೆಯರ್ ಪ್ರಶಸ್ತಿ” ನೀಡಿ ಸನ್ಮಾನಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಹ್ವಾನ್ವಿತರಾಗಿದ್ದ ಹಿರಿಯ ಸಾಹಿತಿ ಡಾ. ಹಂ.ಪ. ನಾಗರಾಜಯ್ಯನವರು ಮಾತನಾಡಿ, ಆತ್ಮೀಯರಾದ ವೆಂಕಟಸ್ವಾಮಿಯವರ ಕಾರ್ಯವೈಖರಿಯನ್ನು, ಇವರ ಸಮಾಜಸೇವಾ ಹಿರಿಮೆಯನ್ನು ಬಾಯ್ತುಂಬಾ ಕೊಂಡಾಡಿದರು. “ಕಳೆದ ಮೂರ್ನಾಲ್ಕು ದಶಕಗಳಿಂದ ತ್ರಿಕರಣ ಪೂರ್ವಕವಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿರುವ “ಇವರು ಎಂ. ವೆಂಕಟಸ್ವಾಮಿಯಲ್ಲ; ನಮ್ ವೆಕಟಸ್ವಾಮಿ” ಎಂದು ಆತ್ಮೀಯತೆ ಹಂಚಿದರು. ಸುದೀರ್ಘವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡ ಇವರು ಈ ಸಮಾಜದ ಸ್ವಾಸ್ಥ್ಯ ಕಾಪಾಡಲು ಆರೋಗ್ಯವಂತರಾಗಿರಲಿ” ಎಂದು ಪ್ರೀತಿಯಿಂದ ಹರಸಿದರು. ಹಾಗೆಯೇ ನಾಲ್ವಡಿ ಕೃಷ್ಣರಾಜ ಒಡೆಯರ ಬಗ್ಗೆ ಮಾತಾಡಿ, ಒಡೆಯರ್ ಸಾಧನೆ ಅನನ್ಯವಾದದ್ದು, ವಿದ್ಯೆಯ ಮಹತ್ವ ಅರಿತಿದ್ದ ಇವರು, ವಯಸ್ಕರ ಶಿಕ್ಷಣಕ್ಕಾಗಿ ತೆರೆದದ್ದು ಏಳು ಸಾವಿರ ಶಾಲೆಗಳು. ಮೈಸೂರು ವಿಶ್ವ ವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ ಹಾಗೆಯೇ, ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ, ಓದಿನ ಪ್ರೋತ್ಸಾಹಕ್ಕೆ ವಿದ್ಯಾರ್ಥಿ ವೇತನ ಕೊಟ್ಟವರು. ಭಾರತದದಲ್ಲೇ ಮೊದಲ ವಿದ್ಯುತ್ ಉತ್ಪಾದನೆಗೆ ಕಾರಣರಾದವರು ಇದೇ ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರ್” ಎಂದರು. ಹೇಳಿ ತೀರದ ಸಾಧನೆ ನಮ್ಮ ಒಡೆಯರ್ ಅವರದ್ದು ಎಂದರು. ಮಾತು ಮುಂದುರೆಸಿ, “ಹತ್ತು ವರ್ಷದ ಈ ಹುಡುಗ ಪಟ್ಪಕ್ಕೆ ಏರಿದಾಗ ಅವರ ತಾಯಿ ಕೆಂಪನಂಜಮ್ಮಣ್ಣಿಯವರು ನೆಡೆಸಿದ ಸಮರ್ಥ ಆಡಳಿತವೇ, ಇವರ ಭವಿಷ್ಯದ ಸಾಧನೆಗೆ ಭದ್ರ ಬುನಾದಿ ಹಾಕಿಕೊಟ್ಟಿತು” ಎಂದರು. ವೇದಿಕೆಯಲ್ಲಿದ್ದ ತೊಂಬತ್ತುಕ್ಕೂ ಹೆಚ್ಚು ವಯಸ್ಸಿನ ವೆಂಕಟಸ್ವಾಮಿಯವರ ತಾಯಿಗೆ ನಮನ ಸಲ್ಲಿಸಿದ ಹಂ.ಪ. ನಾಗರಾಜಯ್ಯ, “ಈ ತಾಯಿಯ ಆಶೀರ್ವಾದದಿಂದಲೇ ವೆಂಕಟಸ್ವಾಮಿ ಎಂಬ ಹುಟ್ಟು ಹೋರಾಟಗಾರನಿಗೆ ಬಲ ಇರೋದು” ಎಂದು ತಾಯಿ ಋಣ ಮತ್ತು ಶಕ್ತಿಯ ಬಗ್ಗೆ ಸಾರಿ ಹೇಳಿದರು.

ಒಟ್ಟಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಬಡವರು, ದೀನ-ದಲಿತರ ಪರ ಧ್ವನಿಯಾಗಿ ನಿಲ್ಲುವ ಧೀಮಂತ ನಾಯಕ ಡಾ.ವೆಂಕಟಸ್ವಾಮಿಯವರ ಎಪ್ಪತ್ತರ ಸಂಭ್ರಮವು ಅರ್ಥಪೂರ್ಣ ಮತ್ತು ಅದ್ಧೂರಿಯಾಗಿ ನೆರವೇರಿತು. ಗಣ್ಯರಾದಿಯಾಗಿ, ಸಮತಾ ಸೈನಿಕ ದಳದ ಮತ್ತು ರಿಪಬ್ಲಿಕನ್ ಪಾರ್ಟಿಯ ಮುಖಂಡರು, ಸದಸ್ಯರುಗಳೂ ಸೇರಿದಂತೆ, ನೆರೆದವರೆಲ್ಲರೂ ಸಹ ಈ ಸಹೃದಯೀ ನೇತಾರನ ಆರೋಗ್ಯಕ್ಕಾಗಿ ಮತ್ತು ದೀರ್ಘ ಆಯಸ್ಸಿಗಾಗಿ ಹರಸಿ ಹಾರೈಸಿದರು.
