ನವದೆಹಲಿ: ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಮೇಲಿನ ಸಂಪೂರ್ಣ ನಿಷೇಧವನ್ನು ಸಡಿಲಗೊಳಿಸುವ ಬಗ್ಗೆ ಸುಪ್ರೀಂ ಕೋರ್ಟ್ ಚಿಂತನೆ ನಡೆಸಿದೆ. ಶುಕ್ರವಾರದ ವಿಚಾರಣೆಯ ವೇಳೆ, ಐದು ದಿನಗಳ ಕಾಲ ಪಟಾಕಿಗಳ ಮೇಲಿನ ನಿಷೇಧವನ್ನು ತಾತ್ಕಾಲಿಕವಾಗಿ ತೆರವುಗೊಳಿಸುವುದಾಗಿ ನ್ಯಾಯಾಲಯವು ಮೌಖಿಕವಾಗಿ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು, ಈ ವಿಷಯದ ಕುರಿತು ತನ್ನ ಆದೇಶವನ್ನು ಕಾಯ್ದಿರಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವ ಸಮಯವನ್ನು ಸಡಿಲಗೊಳಿಸಬೇಕೆಂದು ನ್ಯಾಯಾಲಯವನ್ನು ಕೋರಿದರು, “ಇದು ದೀಪಾವಳಿಯ ಕೆಲವೇ ದಿನಗಳ ವಿಷಯ. ಮಕ್ಕಳು ಉತ್ಸಾಹದಿಂದ ದೀಪಾವಳಿಯನ್ನು ಆಚರಿಸಲಿ” ಎಂದು ಅವರು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಸದ್ಯಕ್ಕೆ, ನಾವು ದೀಪಾವಳಿ ಸಂದರ್ಭದಲ್ಲಿ ನಿಷೇಧವನ್ನು ತೆರವುಗೊಳಿಸಲು ಅನುಮತಿಸುತ್ತೇವೆ. ಇದನ್ನು ಪ್ರಾಯೋಗಿಕ ಆಧಾರದ ಮೇಲೆ ಐದು ದಿನಗಳ ಕಾಲ ಅನುಮತಿಸಲಾಗುವುದು. ಆದಾಗ್ಯೂ, ನಾವು ಕೆಲವು ಸಮಯದ ಮಿತಿಗಳನ್ನು ವಿಧಿಸುತ್ತೇವೆ,” ಎಂದು ಹೇಳಿದೆ.
ದ್ರ ಸರ್ಕಾರವು ಈ ಕೆಳಗಿನ ಸಮಯದ ಮಿತಿಗಳನ್ನು ಪ್ರಸ್ತಾಪಿಸಿದೆ:
ದೀಪಾವಳಿ ಮತ್ತು ಪ್ರಮುಖ ಹಬ್ಬಗಳು: ರಾತ್ರಿ 8 ರಿಂದ 10 ಗಂಟೆಯವರೆಗೆ.
ಹೊಸ ವರ್ಷದ ಮುನ್ನಾದಿನ: ರಾತ್ರಿ 11:55 ರಿಂದ 12:30 ರವರೆಗೆ.
ಗುರುಪುರಬ್: ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ.
ಕೇವಲ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (NEERI) ಅನುಮೋದಿತ ‘ಹಸಿರು ಪಟಾಕಿ’ಗಳ ಮಾರಾಟ ಮತ್ತು ಬಳಕೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಪರಿಸರವಾದಿಗಳ ಆತಂಕ
ಪಟಾಕಿ ನಿಷೇಧವನ್ನು ಸಡಿಲಗೊಳಿಸುವ ಬಗ್ಗೆ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. “ನಕಲಿ ಹಸಿರು ಪಟಾಕಿಗಳು” ಮಾಲಿನ್ಯಕಾರಕ ರಾಸಾಯನಿಕಗಳನ್ನು ಬಳಸಿ ಮಾರಾಟವಾಗುತ್ತಿವೆ ಎಂದು ನ್ಯಾಯಾಲಯಕ್ಕೆ ಸಹಕರಿಸುತ್ತಿದ್ದ ಅಮಿಕಸ್ ಕ್ಯೂರಿ, ಹಿರಿಯ ವಕೀಲೆ ಅಪರಾಜಿತಾ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ. ಹಸಿರು ಪಟಾಕಿಗಳು ಸಾಮಾನ್ಯ ಪಟಾಕಿಗಳಿಗಿಂತ ಶೇ.30ರಷ್ಟು ಕಡಿಮೆ ಮಾಲಿನ್ಯ ಉಂಟುಮಾಡಿದರೂ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಅವುಗಳ ಪರಿಣಾಮವು ಹಲವು ದಿನಗಳವರೆಗೆ ಇರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.