ಅಹಮದಾಬಾದ್: ಗುಜರಾತ್ ಟೈಟಾನ್ಸ್ ತಂಡವು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್‌ಗಾಗಿ ಆಸ್ಟ್ರೇಲಿಯಾದ ಮಾಜಿ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಅವರನ್ನು ತಂಡದ ಸಹಾಯಕ ಕೋಚ್ ಆಗಿ ನೇಮಿಸಿದೆ. ವೇಡ್ 2022 ಮತ್ತು 2024ರಲ್ಲಿ ಗುಜರಾತ್ ಟೈಟಾನ್ಸ್ ಪರವಾಗಿ ಎರಡು ಸೀಸನ್‌ಗಳಲ್ಲಿ ಆಡಿದ್ದರು. ಈ ಅವಧಿಯಲ್ಲಿ ಅವರು 12 ಪಂದ್ಯಗಳಲ್ಲಿ 159 ರನ್‌ಗಳನ್ನು ಗಳಿಸಿದ್ದರು. ಕಳೆದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ವೇಡ್, 2024ರ ಐಪಿಎಲ್ ಹರಾಜಿನಲ್ಲಿ ಹೆಸರು ನೊಂದಾಯಿಸಿರಲಿಲ್ಲ.
“ಚಾಂಪಿಯನ್ ಮತ್ತು ಫೈಟರ್, ಈಗ ನಮ್ಮ ಸಹಾಯಕ ಕೋಚ್! ಗುಜರಾತ್ ಟೈಟಾನ್ಸ್ ಕುಟುಂಬಕ್ಕೆ ಮತ್ತೆ ಸ್ವಾಗತ, ಮ್ಯಾಥ್ಯೂ ವೇಡ್!” ಎಂದು ಟೈಟಾನ್ಸ್ ಫ್ರಾಂಚೈಸಿ ಅವರನ್ನು ಸ್ವಾಗತಿಸಿದೆ. ವೇಡ್ ಈಗ ಬ್ಯಾಟಿಂಗ್ ಕೋಚ್ ಪಾರ್ಥಿವ್ ಪಟೇಲ್, ಮುಖ್ಯ ಕೋಚ್ ಆಶಿಷ್ ನೆಹ್ರಾ ಮತ್ತು ಇತರ ಸಹಾಯಕ ಕೋಚ್‌ಗಳಾದ ಆಶಿಷ್ ಕಪೂರ್ ಮತ್ತು ನರೇಂದ್ರ ನೇಗಿ ಅವರೊಂದಿಗೆ ತಂಡದ ಕೋಚಿಂಗ್ ಸಿಬ್ಬಂದಿಯಲ್ಲಿ ಸೇರಿದ್ದಾರೆ. ವೇಡ್ ಈಗಾಗಲೇ ಭಾರತಕ್ಕೆ ಆಗಮಿಸಿದ್ದು, ಗುಜರಾತ್ ಟೈಟಾನ್ಸ್ ತಂಡದ ಅಭ್ಯಾಸ ಶಿಬಿರದಲ್ಲಿ ಭಾಗವಹಿಸಿದ್ದಾರೆ.
18ನೇ ಐಪಿಎಲ್ ಸೀಸನ್ ಮಾರ್ಚ್ 22ರಿಂದ ಆರಂಭವಾಗಲಿದೆ. ಗುಜರಾತ್ ಟೈಟಾನ್ಸ್ ತಂಡ ಮಾರ್ಚ್ 25ರಂದು ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದೆ.
ವೇಡ್‌ನ ಐಪಿಎಲ್ ವೃತ್ತಿಜೀವನ:
ವೇಡ್ ಐಪಿಎಲ್‌ನಲ್ಲಿ ಒಟ್ಟಾರೆ 15 ಪಂದ್ಯಗಳಲ್ಲಿ 13.07 ಸರಾಸರಿಯಲ್ಲಿ 183 ರನ್‌ಗಳನ್ನು ಗಳಿಸಿದ್ದಾರೆ. 2011ರಲ್ಲಿ ಅವರು ಡೆಲ್ಲಿ ಡೇರ್‌ಡೆವಿಲ್ಸ್ ಪರವಾಗಿ ಆಡಿದ್ದರು. ಆ ನಂತರ, ಅವರು ಮತ್ತೆ ಐಪಿಎಲ್‌ಗೆ ಮರಳಲು 11 ವರ್ಷಗಳ ಕಾಲ ಕಾಯಬೇಕಾಗಿತ್ತು. 2022ರಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೇರಿದ ನಂತರ ಅವರು ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು.
ಗುಜರಾತ್ ಟೈಟಾನ್ಸ್ ತಂಡದ ಸದಸ್ಯರು:
ರಶೀದ್ ಖಾನ್, ಶುಭಮನ್ ಗಿಲ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ಕಗಿಸೊ ರಬಾಡಾ, ಜಾಸ್ ಬಟ್ಲರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ನಿಶಾಂತ್ ಸಿಂಧು, ಮಹಿಪಾಲ್ ಲೊಮ್ರೋರ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಮಾನವ್ ಸುತಾರ್, ವಾಷಿಂಗ್ಟನ್ ಸುಂದರ್, ಜೆರಾಲ್ಡ್ ಕೋಟ್ಜಿ, ಅರ್ಷದ್ ಖಾನ್, ಗುರ್ನೂರ್ ಬ್ರಾರ್, ಶೆರ್ಫೇನ್ ರುದರ್ಫೋರ್ಡ್, ಆರ್. ಸಾಯಿ ಕಿಶೋರ್, ಇಶಾಂತ್ ಶರ್ಮಾ, ಜಯಂತ್ ಯಾದವ್, ಗ್ಲೆನ್ ಫಿಲಿಪ್ಸ್, ಕರೀಂ ಜನತ್, ಕುಲ್ವಂತ್ ಖೆಜ್ರೋಲಿಯಾ.