ಬೀದರ್: ಇರಾನ್–ಇಸ್ರೇಲ್ ನಡುವಿನ ತೀವ್ರ ಯುದ್ಧ ಪರಿಸ್ಥಿತಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆಯಾಗಿರುವ ಹಿನ್ನೆಲೆ ಬೀದರ್‌ನಲ್ಲಿ ಇಸ್ರೇಲ್–ಅಮೆರಿಕಾ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಯಿತು.
ನಗರದ ಇರಾನಿ ಬಡಾವಣೆಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ, ಇರಾನಿ ದರ್ಗಾದಿಂದ ಸ್ಮಶಾನ ಭೂಮಿವರೆಗೆ ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರು ಕೈಯಲ್ಲಿ ಖಮೇನಿ ಅವರ ಭಾವಚಿತ್ರ ಹಿಡಿದು ಘೋಷಣೆಗಳನ್ನು ಕೂಗಿದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಇಸ್ರೇಲ್ ಮತ್ತು ಅಮೆರಿಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಭಾರತ ಸರ್ಕಾರ ಅಮೆರಿಕಾ ವಿರುದ್ಧ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಭಾರತ–ಇರಾನ್ ನಡುವಿನ ಉತ್ತಮ ಸಂಬಂಧಗಳು ಇಂದಿರಗಾಂಧಿ ಹಾಗೂ ಅಟಲ್ ಬಿಹಾರಿ ವಾಜ್ಪೆ ಅವರ ಕಾಲದಲ್ಲೂ ಉತ್ತಮವಾಗಿದ್ದವು ಎಂದು ಅವರು ಉಲ್ಲೇಖಿಸಿದರು. ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ : ಇರಾನ್ ಪರಮೋಚ್ಚ ನಾಯಕ ಅಲಿ ಖಮೇನಿ ಹತ್ಯೆ ಖಂಡಿಸಿ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ | ನೂರಾರು ಮುಸ್ಲಿಂ ಮಹಿಳೆಯರು ಭಾಗಿ



















