ಬೆಂಗಳೂರು : ಯಲಚೇನಹಳ್ಳಿಯಲ್ಲಿರುವ ಡೋಮಿನೋಸ್ ಪಿಜ್ಜಾ ಕಟ್ಟಡದ ನೆಲಮಹಡಿಯಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಇವಿ ದ್ವಿಚಕ್ರ ವಾಹನಗಳ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಧಗಧಗಿಸಿದೆ. ಬೆಂಕಿಯ ಕೆನ್ನಾಲಿಗೆಗೆ 19 ಇವಿ ಬೈಕ್‌ಗಳು ಸುಟ್ಟು ಕರಕಲಾಗಿದ್ದು, ಒಂದು ಸಿಲಿಂಡರ್ ಸ್ಫೋಟಗೊಂಡಿದೆ.
ಕನಕಪುರ ರಸ್ತೆ ಮೆಟ್ರೋ ನಿಲ್ದಾಣದ ಸಮೀಪದಲ್ಲಿರುವ ಡೋಮಿನೋಸ್ ಪಿಜ್ಜಾ ಕಟ್ಟಡದ ನೆಲಮಹಡಿಯಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ನೆಲಮಹಡಿಯಲ್ಲಿದ್ದ ಇವಿ ದ್ವಿಚಕ್ರ ವಾಹನಗಳ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚಾರ್ಜಿಂಗ್ ವೇಳೆ ಓವರ್ ಹೀಟ್‌ನಿಂದಾಗಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದ್ದು, ನಂತರ ಪಾರ್ಕಿಂಗ್ ಪ್ರದೇಶದಲ್ಲಿದ್ದ ಗ್ಯಾಸ್ ಲೈನ್‌ಗೂ ಬೆಂಕಿ ವ್ಯಾಪಿಸಿದೆ. ಈ ವೇಳೆ ಒಂದು ಸಿಲಿಂಡರ್ ಸ್ಫೋಟಗೊಂಡಿದ್ದು, ಅದರ ತೀವ್ರತೆಗೆ ಭಾರೀ ಅವಘಡ ಸಂಭವಿಸಿದೆ.
ಅವಘಡದಲ್ಲಿ ಐದಾರು ಸಿಲಿಂಡರ್‌ಗಳಲ್ಲಿ ಗ್ಯಾಸು ಲೀಕೆಜ್ ಉಂಟಾಗಿದ್ದ ರಿಂದ ಪರಿಸ್ಥಿತಿ ತೀವ್ರವಾಗಿತ್ತು. ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆ, ಎರಡು ಅಗ್ನಿಶಾಮಕ ವಾಹನಗಳು ತುರ್ತಾಗಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡವು. ಕೆ.ಎಸ್. ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.


















