ಆನೇಕಲ್: ಆಯಿಲ್ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೀಲಲಿಗೆಯಲ್ಲಿ ನಡೆದಿದೆ.
ವಿಶಾಲ್ ಟ್ರೈಬೊಟೆಕ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದ ಆಯಿಲ್ ಬ್ಯಾರೆಲ್ ಗಳನ್ನು ಶೇಖರಿಸಲಾಗಿತ್ತು. ಏಕಾಏಕಿ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಇಡೀ ಕಾರ್ಖಾನೆಯನ್ನು ಆವರಿಸಿದೆ. ತಕ್ಷಣ ಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದು, ಸಿಬ್ಬಂದಿ ಕಳೆದ ಐದು ಗಂಟೆಗಳಿಂದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಅಗ್ನಿ ಅವಘಡದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರ್ಖಾನೆಯಲ್ಲಿ ಸುಮಾರು 40 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ಇಂದು ಭಾನುವಾರ ಆಗಿರುವುದರಿಂದ ರಜೆ ಇತ್ತು. ಹೀಗಾಗಿ ಅಗ್ನಿ ಅವಘಡದ ವೇಳೆ ಕಾರ್ಖಾನೆಯಲ್ಲಿ ಕಾರ್ಮಿಕರು ಇರಲಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.