ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಈಗಾಗಲೇ ಕೇಂದ್ರ ಸರ್ಕಾರವು ದೀಪಾವಳಿ ಬೋನಸ್ ಘೋಷಣೆ ಮಾಡಿದೆ. ಇದರಿಂದಾಗಿ ನೌಕರರು 17 ಸಾವಿರ ರೂಪಾಯಿವರೆಗೆ ಬೋನಸ್ ಪಡೆಯಲಿದ್ದಾರೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರಿ ನೌಕರರಿಗೆ ಕೂಡ ಸರ್ಕಾರವು ದೀಪಾವಳಿ ಉಡುಗೊರೆ ನೀಡುವುದು ಬಹುತೇಕ ಖಚಿತವಾಗಿದೆ. ಅದರಲ್ಲೂ, ಅಕ್ಟೋ ಬರ್ ನಲ್ಲಿ ಕೇಂದ್ರ ನೌಕರರು ಶೇ.3ರಷ್ಟು ತುಟ್ಟಿಭತ್ಯೆ (DA hike) ಹೆಚ್ಚಳದ ಲಾಭ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರವು ನೌಕರರಿಗೆ ಈಗ ಶೇ.55ರಷ್ಟು ಡಿಎ ನೀಡುತ್ತಿದೆ. ಈ ಮೊತ್ತವನ್ನು ಶೇ.58ಕ್ಕೆ ಏರಿಸುವುದು ನಿಶ್ಚಿತವಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗೇನಾದರೂ ಸರ್ಕಾರವು ಡಿಎ ಹೆಚ್ಚಳ ಮಾಡಿದರೆ, ಕೇಂದ್ರ ಸರ್ಕಾರದ ಸುಮಾರು 48 ಲಕ್ಷ ನೌಕರರಿಗೆ ಅನುಕೂಲವಾಗಲಿದೆ. ದಸರಾ ನಂತರ ಹಾಗೂ ದೀಪಾವಳಿಗೆ ಮೊದಲು ಡಿಎ ಹೆಚ್ಚಳದ ಕುರಿತು ಅಧಿಕೃತ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರವು ನೌಕರರಿಗೆ ವರ್ಷದಲ್ಲಿ ಎರಡು ಬಾರಿ ಡಿಎ ಹೆಚ್ಚಳ ಮಾಡುತ್ತದೆ. ಅಕ್ಟೋಬರ್ ನಲ್ಲಿ ಡಿಎ ಹೆಚ್ಚಿಸಿದರೆ, ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳ ಅರಿಯರ್ಸ್ ಸೇರಿ ಡಿಎ ಜಮೆಯಾಗುತ್ತದೆ. ಇದರಿಂದ ಲಕ್ಷಾಂತರ ನೌಕರರು ಖುಷಿಯಿಂದ ದೀಪಾವಳಿ ಆಚರಿಸಬಹುದಾಗಿದೆ. ಏಳನೇ ವೇತನ ಆಯೋಗದ ಅನ್ವಯ ಡಿಎ ಹೆಚ್ಚಳ ಮಾಡಲಾಗುತ್ತದೆ.
ಇದರ ಜತೆಗೆ, ಕೇಂದ್ರ ಸರ್ಕಾರವು ಶೀಘ್ರದಲ್ಲೇ 8ನೇ ವೇತನ ಆಯೋಗವನ್ನು ರಚಿಸುವ ಸಾಧ್ಯತೆ ಇದೆ. ಇದು ಜನವರಿ 1, 2026 ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಅಕ್ಟೋಬರ್ ತಿಂಗಳಲ್ಲೇ ಸರ್ಕಾರವು 8ನೇ ವೇತನ ಆಯೋಗದ ರಚನೆ ಕುರಿತು ಕಾರ್ಯಾದೇಶ (ToR) ಹೊರಡಿಸಬಹುದು ಮತ್ತು 8ನೇ ವೇತನ ಆಯೋಗವನ್ನು ಅಧಿಕೃತವಾಗಿ ಘೋಷಿಸಬಹುದು ಎಂದು ಹೇಳಲಾಗುತ್ತಿದೆ.


















