ಪೋರ್ಟ್ ಆರ್ಥರ್ (ಟೆಕ್ಸಾಸ್) : ಅಮೆರಿಕದ ಟೆಕ್ಸಾಸ್ ಕರಾವಳಿಯ ಸಮೀಪವಿರುವ ಬೃಹತ್ ತೈಲ ಸಂಸ್ಕರಣಾಗಾರವೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಆಕಾಶಕ್ಕೆ ಚಿಮ್ಮಿದ ದಟ್ಟವಾದ ಕಪ್ಪು ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಕಿಲೋಮೀಟರ್ ದೂರದವರೆಗೂ ಗೋಚರಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ಘಟನೆಯು ಮಧ್ಯಪ್ರಾಚ್ಯದ ಯುದ್ಧವೇನಾದರೂ ಅಮೆರಿಕವನ್ನೂ ತಲುಪಿತೇ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ.
ಹೂಸ್ಟನ್‌ನಿಂದ ಸುಮಾರು 145 ಕಿಲೋಮೀಟರ್ ದೂರದಲ್ಲಿರುವ ಪೋರ್ಟ್ ಆರ್ಥರ್‌ನ ‘ವಲೆರೋ’ (Valero) ತೈಲ ಸಂಸ್ಕರಣಾಗಾರದಲ್ಲಿ ಈ ದುರ್ಘಟನೆ ನಡೆದಿದೆ. ಸ್ಫೋಟದ ನಂತರ ನಗರದ ಪಶ್ಚಿಮ ಭಾಗದ ನಿವಾಸಿಗಳಲ್ಲಿ ಆತಂಕ ಮನೆಮಾಡಿದ್ದರೂ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಮೇಯರ್ ಶಾಲೆಟ್ ಎಂ. ಮೋಸೆಸ್ ಸ್ಪಷ್ಟಪಡಿಸಿದ್ದಾರೆ. “ಸ್ಫೋಟ ಉಂಟಾಗಿದ್ದು ನಿಜ, ಆದರೆ ಎಲ್ಲರೂ ಸುರಕ್ಷಿತವಾಗಿದ್ದಾರೆ. ಅಗ್ನಿಶಾಮಕ ದಳವು ಶೀಘ್ರವೇ ಬೆಂಕಿಯನ್ನು ನಂದಿಸಿದೆ,” ಎಂದು ಅವರು ತಿಳಿಸಿದ್ದಾರೆ.
ಮನೆಗಳ ಕಿಟಕಿಗಳು ಪುಡಿ ಪುಡಿ
ಸಂಸ್ಕರಣಾಗಾರದಲ್ಲಿ ಸ್ಫೋಟ ಸಂಭವಿಸಿದಾಗ ಭಾರೀ ದೊಡ್ಡದಾಗ ಶಬ್ದ ಕೇಳಿಬಂದಿದ್ದು, ಸಮೀಪದ ಮನೆಗಳ ಗಾಜಿನ ಕಿಟಕಿಗಳು ಕೂಡ ಒಡೆದುಹೋಗಿವೆ. ಜನರಿಗೆ ನಡುಗಿದ ಅನುಭವವಾಗಿದೆ ಎಂದು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ. ವಲೆರೋ ಸಂಸ್ಥೆಯು ಪ್ರತಿದಿನ ಸುಮಾರು 4,35,000 ಬ್ಯಾರೆಲ್ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು, ಇಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನಗಳನ್ನು ತಯಾರಿಸಲಾಗುತ್ತದೆ. ಸದ್ಯ ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಉಂಟಾಗಿ, ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಈ ಸ್ಫೋಟ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ವಾಯು ಗುಣಮಟ್ಟದ ಮೇಲೆ ನಿಗಾ
ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿರುವ ಟೆಕ್ಸಾಸ್ ಪರಿಸರ ಗುಣಮಟ್ಟ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ವಾಯು ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡುವ ಉಪಕರಣಗಳೊಂದಿಗೆ ತಪಾಸಣೆ ನಡೆಸುತ್ತಿದ್ದಾರೆ. “ತುರ್ತು ಸೇವಾ ಸಿಬ್ಬಂದಿಯಿಂದ ಮುಂದಿನ ಆದೇಶ ಬರುವವರೆಗೂ ಮನೆಯಿಂದ ಹೊರಬರಬೇಡಿ. ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿಡಿ ಹಾಗೂ ಹೊರಾಂಗಣ ಚಟುವಟಿಕೆಗಳನ್ನು ಸೀಮಿತಗೊಳಿಸಿ,” ಎಂದು ರಾಜ್ಯ ಪ್ರತಿನಿಧಿ ಕ್ರಿಶ್ಚಿಯನ್ ಮ್ಯಾನುಯೆಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ.
ಇದನ್ನೂ ಓದಿ : ಬಳ್ಳಾರಿಯ ಕೆಐಎಡಿಬಿ ಕಚೇರಿಯಲ್ಲಿ 16.17 ಕೋಟಿ ಲೂಟಿ – 7 ಮಂದಿ ವಿರುದ್ಧ FIR



















