ಬೆಂಗಳೂರು: ಬೃಹತ್ ಪ್ರಮಾಣದಲ್ಲಿ ಡ್ರಗ್ಸ್ ಶೇಖರಿಸಿಟ್ಟಿದ್ದ ವಿದೇಶಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 70 ಲಕ್ಷ ರೂ. ಮೌಲ್ಯದ 700 ಗ್ರಾಂ ಎಂಡಿಎಂಎ ಸೀಜ್ ಮಾಡಲಾಗಿದೆ. ಅಲ್ಲದೇ, ಆರೋಪಿಗಳ ಮಾಹಿತಿ ಆಧರಿಸಿ ಮತ್ತೊಂದು ಪ್ರಕರಣದಲ್ಲಿ 800 ಗ್ರಾಂ ವಿವಿಧ ಮಾದರಿಯ ಡ್ರಗ್ಸ್ ನ್ನು ಸೀಜ್ ಮಾಡಲಾಗಿದೆ.
ಯಲಹಂಕ ಉಪನಗರ ಪೊಲೀಸರಿಂದ ದಾಳಿ ನಡೆದಿದೆ. ದೊಡ್ಡಬೆಟ್ಟಹಳ್ಳಿ ಗ್ರಾಮದ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ಡ್ರಗ್ಸ್ ಶೇಖರಿಸಿಟ್ಟಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಘಾನಾ ದೇಶದ ಪ್ರಜೆಗಳು ಎಂದು ಗುರುತಿಸಲಾಗಿದೆ.
ಅಡ್ಮ್ಮಾಕೊ ಬ್ರೈಟ್ ಮತ್ತು ಎನ್ಕೇಟೈ ಕೋಫಿ ಬಂಧಿತ ಆರೋಪಿಗಳು. ಆರೋಪಿಗಳ ಮಾಹಿತಿ ಆಧರಿಸಿ ನಂತರ 7 ಕಡೆ ದಾಳಿ ನಡೆಸಲಾಗಿದೆ. ದಾಳಿ ಸಂದರ್ಭದಲ್ಲಿ ಪಾಸ್ ಪೋರ್ಟ್ ಅವಧಿ ಮೀರಿ ಅಕ್ರಮವಾಗಿ ವಾಸ ಮಾಡುತ್ತಿದ್ದ 9 ವಿದೇಶಿಗರನ್ನು ಬಂಧಿಸಲಾಗಿದೆ. ಇಬ್ಬರು ಮಹಿಳಾ ವಿದೇಶಿಗಳ ಮನೆಯಲ್ಲೂ ಡ್ರಗ್ಸ್ ಪತ್ತೆಯಾಗಿದೆ. ಸುಮಾರು 800 ಗ್ರಾಂ. ವಿವಿಧ ಮಾದರಿ ಡ್ರಗ್ಸ್ ನ್ನು ಸೀಜ್ ಮಾಡಲಾಗಿದೆ. ಆನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆನೆಡಿಕ್ಟ್ ಮತ್ತು ಪ್ರಿಸ್ಕಿಲ್ ಎಂಬ ಮಹಿಳೆಯರನ್ನು ಬಂಧಿಸಲಾಗಿದೆ.