ಉಡುಪಿ : ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕಿಕಟ್ಟೆ ಬಳಿ ಖತರ್ನಾಕ್ ಮುಸುಕುಧಾರಿ ಕಳ್ಳರ ತಂಡವೊಂದು ಮನೆಗಳಿಗೆ ನುಗ್ಗಿ ಕಳವಿಗೆ ಪ್ರಯತ್ನಿಸಿರುವ ಘಟನೆ ಇಂದು (ಬುಧವಾರ) ನಸುಕಿನ ಜಾವ ನಡೆದಿದೆ. ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮೇರಾಗಳಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮೂವರು ಮುಸುಕುಧಾರಿಗಳ ತಂಡ ಕುಕ್ಕಿಕಟ್ಟೆ ಮುಚ್ಚಲಗೋಡು ಸಮೀಪದ ಸುಬ್ರಹ್ಮಣ್ಯ ನಗರದ ವಿಠಲ ಪೂಜಾರಿ ಎನ್ನುವವರ ಮನೆಗೆ ನುಗ್ಗಿದ್ದು, ಅಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಸ್ವತ್ತಿಗಾಗಿ ಹುಡುಕಾಟ ಮಾಡಿದೆ. ಆದರೆ ಯಾವುದೇ ಸ್ವತ್ತುಗಳು ದೊರಕದ ಹಿನ್ನೆಲೆಯಲ್ಲಿ ಕಳ್ಳರು ಅಲ್ಲಿಂದ ತೆರಳಿದ್ದಾರೆ.
ಮುಂದೆ ಅಲ್ಲೇ ಬಳಿ ಇನ್ನೊಂದು ಮನೆಗೆ ನುಗ್ಗಲು ಯತ್ನಿಸಿದಾಗ ಮನೆಯವರು ಎಚ್ಚರಗೊಂಡು ದೀಪ ಹಾಕಿದರು. ಈ ವೇಳೆ ಕಳ್ಳರ ತಂಡ ಅಲ್ಲಿಂದ ಪರಾರಿಯಾಗಿದೆ. ಪರಿಸರದ ಸಿಸಿಟಿವಿಯೊಂದರಲ್ಲಿ ಕಳ್ಳರು ರಸ್ತೆಯಲ್ಲಿ ಮನೆಗಳನ್ನು ಗುರುತಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಕಂಡು ಬಂದಿವೆ.
ಖಚಿತ ಮಾಹಿತಿ ಮೇರೆಗೆ ಉಡುಪಿ ನಗರ ಪೊಲೀಸರು ಘಟನಾ ಸ್ಥಳಕ್ಕೆ ಪರಿಶೀಲನೆ ನಡೆಸಿದ್ದಾರೆ.