ಬೆಂಗಳೂರು : ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಎಸ್‌ಯುವಿಗಳ ಅಬ್ಬರ ಮುಂದುವರಿದಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ, ತನ್ನ ಮಧ್ಯಮ ಕ್ರಮಾಂಕದ ಎಸ್‌ಯುವಿ ‘ವಿಕ್ಟೋರಿಸ್’ (Victoris) ಮೂಲಕ ಹೊಸ ಇತಿಹಾಸ ಬರೆದಿದೆ. ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಈ ಕಾರು ಬರೋಬ್ಬರಿ 50,000 ಯುನಿಟ್ ಮಾರಾಟದ ಮೈಲಿಗಲ್ಲನ್ನು ದಾಟುವ ಮೂಲಕ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಈ ಮೂಲಕ ಸ್ಪರ್ಧಾತ್ಮಕ ಮಿಡ್-ಸೈಜ್ ಎಸ್‌ಯುವಿ ವಿಭಾಗದಲ್ಲಿ ಮಾರುತಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ. ಅಕ್ಟೋಬರ್ 2025 ರಿಂದ ಜನವರಿ 2026ರ ಅವಧಿಯಲ್ಲಿ ಸರಾಸರಿ ಮಾಸಿಕ ಮಾರಾಟ ಪ್ರಮಾಣವು ದ್ವಿಗುಣಗೊಂಡು 21,155 ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಕಂಪನಿ ಹೆಮ್ಮೆಯಿಂದ ಹೇಳಿಕೊಂಡಿದೆ.
ಈ ಸಾಧನೆಯು ಮಾರುತಿ ಸುಜುಕಿಗೆ ಡಬಲ್ ಧಮಾಕಾ ತಂದುಕೊಟ್ಟಿದೆ. ಏಕೆಂದರೆ, ಜನವರಿ 2026ರಲ್ಲಿ ಕಂಪನಿ ತನ್ನ ಇತಿಹಾಸದಲ್ಲೇ ಅತ್ಯಧಿಕ ಮಾಸಿಕ ಸಗಟು ಮಾರಾಟವನ್ನು ದಾಖಲಿಸಿದೆ. ಒಟ್ಟು 2,36,962 ವಾಹನಗಳನ್ನು ಮಾರಾಟ ಮಾಡುವ ಮೂಲಕ ಶೇ. 11.6 ರಷ್ಟು ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ. ವಿಶೇಷವೆಂದರೆ, ರಫ್ತು ವಲಯದಲ್ಲೂ ಭರ್ಜರಿ ಪ್ರಗತಿ ಸಾಧಿಸಿದ್ದು, ಬರೋಬ್ಬರಿ 51,020 ವಾಹನಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ಇದು ಬ್ರ್ಯಾಂಡ್‌ನ ಸಾರ್ವಕಾಲಿಕ ಶ್ರೇಷ್ಠ ರಫ್ತು ಸಾಧನೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲೂ 1,78,300 ಯುನಿಟ್‌ಗಳು ಮಾರಾಟವಾಗಿದ್ದು, ಯಾವುದೇ ಜನವರಿ ತಿಂಗಳಿಗೆ ಹೋಲಿಸಿದರೆ ಇದು ಸಾರ್ವಕಾಲಿಕ ದಾಖಲೆಯಾಗಿದೆ.
ಆಕರ್ಷಕ ವಿನ್ಯಾಸ
ವಿಕ್ಟೋರಿಸ್‌ನ ಈ ಜನಪ್ರಿಯತೆಗೆ ಪ್ರಮುಖ ಕಾರಣ ಅದರ ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳು. 4,360 ಮಿ.ಮೀ ಉದ್ದದ ಈ ಎಸ್‌ಯುವಿ, ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಕನೆಕ್ಟೆಡ್ ಟೈಲ್‌ಲ್ಯಾಂಪ್‌ಗಳು ಮತ್ತು 17-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ರಸ್ತೆಯಲ್ಲಿ ಗಮನ ಸೆಳೆಯುವಂತಹ ಲುಕ್ ಹೊಂದಿದೆ. ಒಳಾಂಗಣದಲ್ಲಿ ಕಪ್ಪು ಮತ್ತು ಐವರಿ ಥೀಮ್, ಪನೋರಮಿಕ್ ಸನ್‌ರೂಫ್, 10.25-ಇಂಚಿನ ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಮತ್ತು ಹರ್ಮನ್ ಆಡಿಯೋ ಸಿಸ್ಟಮ್ ಸೇರಿದಂತೆ ಪ್ರೀಮಿಯಂ ಫೀಚರ್‌ಗಳನ್ನು ನೀಡಲಾಗಿದೆ.
ಸುರಕ್ಷತೆಯ ವಿಷಯದಲ್ಲೂ ರಾಜಿ ಮಾಡಿಕೊಂಡಿಲ್ಲ. ಭಾರತ್ ಎನ್‌ಸಿಎಪಿ (Bharat NCAP) ಸುರಕ್ಷತಾ ಪರೀಕ್ಷೆಯಲ್ಲಿ 5-ಸ್ಟಾರ್ ರೇಟಿಂಗ್ ಪಡೆದಿರುವ ವಿಕ್ಟೋರಿಸ್, 6 ಏರ್‌ಬ್ಯಾಗ್‌ಗಳು, ಎಡಿಎಎಸ್ ಲೆವೆಲ್-2 ತಂತ್ರಜ್ಞಾನ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಅತ್ಯಾಧುನಿಕ ಸುರಕ್ಷತಾ ಸಾಧನಗಳನ್ನು ಹೊಂದಿದೆ.
ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಪೆಟ್ರೋಲ್, ಸ್ಟ್ರಾಂಗ್-ಹೈಬ್ರಿಡ್ ಮತ್ತು ಸಿಎನ್‌ಜಿ ಎಂಬ ಮೂರು ವಿಭಿನ್ನ ಪವರ್‌ಟ್ರೇನ್ ಆಯ್ಕೆಗಳಲ್ಲಿ ಈ ಕಾರು ಲಭ್ಯವಿದೆ. ಅದರಲ್ಲೂ ಹೈಬ್ರಿಡ್ ಆವೃತ್ತಿಯು ಪ್ರತಿ ಲೀಟರ್‌ಗೆ 28.65 ಕಿ.ಮೀ ಮೈಲೇಜ್ ನೀಡುವ ಮೂಲಕ ಇಂಧನ ದಕ್ಷತೆಯಲ್ಲಿ ಹೊಸ ಬೆಂಚ್‌ಮಾರ್ಕ್ ಸೃಷ್ಟಿಸಿದೆ. ಆಫ್-ರೋಡ್ ಪ್ರಿಯರಿಗಾಗಿ ಆಲ್-ಗ್ರಿಕ್ ಸೆಲೆಕ್ಟ್ (ALLGRIP Select) ಆಲ್-ವೀಲ್ ಡ್ರೈವ್ ಆಯ್ಕೆಯನ್ನೂ ನೀಡಲಾಗಿದೆ. ಒಟ್ಟಾರೆಯಾಗಿ, ಬಲವಾದ ಮಾರಾಟದ ವೇಗ, ವೈವಿಧ್ಯಮಯ ಎಂಜಿನ್ ಆಯ್ಕೆಗಳು ಮತ್ತು ಶ್ರೀಮಂತ ವೈಶಿಷ್ಟ್ಯಗಳೊಂದಿಗೆ, ವಿಕ್ಟೋರಿಸ್ ಎಸ್‌ಯುವಿ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಸ್ಥಾನವನ್ನು ಮತ್ತಷ್ಟು ಭದ್ರಪಡಿಸುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ.
ಇದನ್ನೂ ಓದಿ : 1000 BHP ಶಕ್ತಿ, ಮೈನಸ್ 40 ಡಿಗ್ರಿಯಲ್ಲೂ ಟೆಸ್ಟಿಂಗ್ | ಜಾಗ್ವಾರ್ ‘ಎಲೆಕ್ಟ್ರಿಕ್ ಜಿಟಿ’ಯ ಆರ್ಕ್ಟಿಕ್ ಸಾಹಸ!



















