ನವದೆಹಲಿ : ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ತನ್ನ ಬಹುನಿರೀಕ್ಷಿತ ಹಾಗೂ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ‘ಇ-ವಿಟಾರಾ’ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಮೂಲಕ ಮಾರುತಿ ಸುಜುಕಿ ಅಧಿಕೃತವಾಗಿ ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ ವಿಭಾಗಕ್ಕೆ ಪ್ರವೇಶಿಸಿದೆ. ಈ ಕಾರು ಹ್ಯುಂಡೈ ಕ್ರೆಟಾ ಇವಿ, ಟಾಟಾ ಕರ್ವ್ ಇವಿ, ಎಂಜಿ ವಿಂಡ್ಸರ್ ಮತ್ತು ಮಹೀಂದ್ರ BE 6 ಕಾರುಗಳಿಗೆ ಪೈಪೋಟಿ ನೀಡಲಿದೆ.
ಇ-ವಿಟಾರಾ ಎಸ್‌ಯುವಿಯ ಆರಂಭಿಕ ಬೆಲೆ 10.99 ಲಕ್ಷ ರೂಪಾಯಿ (ಎಕ್ಸ್ ಶೋರೂಂ) ಎಂದು ನಿಗದಿಪಡಿಸಲಾಗಿದೆ. ಇದಲ್ಲದೆ, ಬ್ಯಾಟರಿಯನ್ನು ಪ್ರತ್ಯೇಕವಾಗಿ ಪರಿಗಣಿಸಲಾಗಿದ್ದು, ಪ್ರತಿ ಕಿಲೋಮೀಟರ್‌ಗೆ 3.99 ರೂಪಾಯಿ ರನ್ನಿಂಗ್ ಕಾಸ್ಟ್ (Running Cost) ಬೀಳಲಿದೆ. ಗ್ರಾಹಕರಿಗೆ ವಾಹನ ಮತ್ತು ಬ್ಯಾಟರಿ ಎರಡರ ಮೇಲೂ 8 ವರ್ಷಗಳ ವಾರಂಟಿ, ಒಂದು ವರ್ಷದ ಉಚಿತ ಚಾರ್ಜಿಂಗ್ ಮತ್ತು 50,000 ರೂಪಾಯಿ ಮೌಲ್ಯದ ಉಚಿತ ಹೋಮ್ ಚಾರ್ಜರ್ ಅಳವಡಿಕೆ ಸೌಲಭ್ಯ ಸಿಗಲಿದೆ. 3 ವರ್ಷಗಳ ನಂತರ ಶೇ. 60ರಷ್ಟು ಬೈಬ್ಯಾಕ್ (Buyback) ಮೌಲ್ಯವನ್ನೂ ಕಂಪನಿ ಭರವಸೆ ನೀಡಿದೆ.
ಬ್ಯಾಟರಿ ಮತ್ತು ರೇಂಜ್
ಇ-ವಿಟಾರಾ ಎರಡು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ: 49kWh ಬ್ಯಾಟರಿ: 440 ಕಿ.ಮೀ ರೇಂಜ್ (ಚಾಲನಾ ವ್ಯಾಪ್ತಿ), 144bhp ಪವರ್ ಮತ್ತು 189Nm ಟಾರ್ಕ್. 61kWh ಬ್ಯಾಟರಿ: 543 ಕಿ.ಮೀ ರೇಂಜ್, 174bhp ಪವರ್ ಮತ್ತು 189Nm ಟಾರ್ಕ್. ಅತ್ಯಾಧುನಿಕ ಸೆಲ್-ಟು-ಪ್ಯಾಕ್ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾದ ಬ್ಯಾಟರಿ ಪ್ಯಾಕ್, -30°C ನಿಂದ 60°C ವರೆಗಿನ ತಾಪಮಾನದಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ವಿನ್ಯಾಸ ಮತ್ತು ವೈಶಿಷ್ಟ್ಯಗಳು
ಹೊಸ HEARTECT-e ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಿಸಲಾದ ಈ ಕಾರು, 4,275mm ಉದ್ದವಿದ್ದು, ಆಕರ್ಷಕ ವಿನ್ಯಾಸ ಹೊಂದಿದೆ. ಒಳಾಂಗಣದಲ್ಲಿ ಟ್ವಿನ್-ಡೆಕ್ ಫ್ಲೋಟಿಂಗ್ ಕನ್ಸೋಲ್, 10.1 ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, ವೆಂಟಿಲೇಟೆಡ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ಪ್ರೀಮಿಯಂ ಹರ್ಮನ್ (Harman) ಸೌಂಡ್ ಸಿಸ್ಟಂ ನೀಡಲಾಗಿದೆ.
ಸುರಕ್ಷತೆ
ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ), 7 ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS) ಅಳವಡಿಸಲಾಗಿದೆ. ಗ್ರಾಹಕರು 21,000 ರೂಪಾಯಿ ಪಾವತಿಸಿ ನೆಕ್ಸಾ (Nexa) ಶೋರೂಂ ಅಥವಾ ವೆಬ್‌ಸೈಟ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ.
ಇದನ್ನೂ ಓದಿ : ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ಗೂಗಲ್ ಪಿಕ್ಸೆಲ್ 10a | ಬೆಲೆ, ಫೀಚರ್ಗಳ ಮಾಹಿತಿ ಇಲ್ಲಿದೆ



















