ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ದಾಳಿಯಲ್ಲಿ ಕನ್ನಡಿಗರು ಇಬ್ಬರು ಸೇರಿದಂತೆ 26 ಮಂದಿ ಹತ್ಯೆಗೊಳಗಾಗಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿ, ಭಾರತೀಯರು ಸಿಡಿದೆದ್ದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಕೂಡ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಕೊಟ್ಟು, ಹಲವಾರು ಮಹತ್ವದ ನಿರ್ಧಾರಗಳನ್ನು ಕೈಕೊಂಡಿದ್ದಾರೆ. ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿಯೇ ಉತ್ತರವನ್ನು ನೀಡುವ ಮೂಲಕ ದಶ ದಿಕ್ಕುಗಳಿಂದ ನಿರ್ಬಂಧವನ್ನು ಹೇರಲಾಗಿದೆ. ಕೇಂದ್ರ ನಿರ್ಧಾರದ ಜತೆಗೆ ರಾಜ್ಯ ಸರ್ಕಾರಗಳು ಕೂಡ ಪಾಕ್ ಪ್ರಜೆಗಳನ್ನು ಭಾರತದಿಂದ ಹೊರಗೆ ಕಳುಹಿಸಲು ಸಿದ್ಧತೆಗಳನ್ನು ನಡೆಸಿದೆ. ಈಗಾಗಲೇ ಸಿಂಧು ನದಿ ಒಪ್ಪಂದವನ್ನು ಅಮಾನತುಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಜೊತೆಗೆ ಎರಡು ದೇಶಗಳ ನಡುವಿನ ಅಟ್ಟಾರಿ-ವಾಘಾ ಗಡಿ ಬಂದ್ ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ರಾಜಸ್ಥಾನದ ವ್ಯಕ್ತಿ ಒಬ್ಬನ ಮದುವೆ ಕ್ಯಾನ್ಸಲ್ ಆಗಿದೆ.
ಹೌದು, ರಾಜಸ್ಥಾನದ ನಿವಾಸಿ ಶೈತಾನ್ ಸಿಂಗ್, ತನ್ನ ಪ್ರೇಯಸಿಯನ್ನು ಮದುವೆಯಾಗಲು ಈ ವಾರ ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಿದ್ಧತೆ ನಡೆಸುತ್ತಿದ್ದ. ಹೀಗಾಗಿ ಮದುವೆಯ ಖುಷಿಯಲ್ಲಿದ್ದ ಶೈತಾನ್ ಸಿಂಗ್ ಆಘಾತವುಂಟಾಗಿದೆ. ಪಾಕಿಸ್ತಾನದ ಯುವತಿಯ ಜೊತೆ ಮದುವೆಯಾಗಲು ಅಟ್ಟಾರಿ ಗಡಿ ದಾಟಲು ಬರಾತ್ನೊಂದಿಗೆ ಹೋಗಿದ್ದರು. ಆದರೆ, ಗಡಿಯನ್ನು ಬಂದ್ ಮಾಡಿರುವುದರಿಂದ ಅವರನ್ನು ವಾಪಾಸ್ ಮನೆಗೆ ಕಳುಹಿಸಲಾಗಿದೆ. ಇದರಿಂದ ಅವರ ಮದುವೆ ಮುರಿದುಬಿದ್ದಿದೆ.



















