ವಾಷಿಂಗ್ಟನ್: ಅಮೆರಿಕದ ಇಂಡಿಯಾನಾ ರಾಜ್ಯದಲ್ಲಿ ವಕೀಲರಾಗಿರುವ ಮಾರ್ಕ್ ಜುಕರ್‌ಬರ್ಗ್ ಎಂಬವರು ಈಗ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರ ಒಡೆತನದ ‘ಮೆಟಾ’ ಕಂಪನಿಯ ವಿರುದ್ಧವೇ ದಾವೆ ಹೂಡಿದ್ದಾರೆ!
ತಮ್ಮ ಫೇಸ್‌ಬುಕ್ ಖಾತೆಯನ್ನು ‘ನಕಲಿ’ ಎಂದು ಪದೇ ಪದೇ ನಿರ್ಬಂಧಿಸುವ ಮೂಲಕ, ಕಂಪನಿಯು ವೃತ್ತಿಪರವಾಗಿ ಮತ್ತು ಆರ್ಥಿಕವಾಗಿ ತಮಗೆ ನಷ್ಟವನ್ನುಂಟುಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಏನಿದು ವಿಚಿತ್ರ ಪ್ರಕರಣ?
ಕಳೆದ 38 ವರ್ಷಗಳಿಂದ ಕಾನೂನು ತಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ವಕೀಲ ಮಾರ್ಕ್ ಎಸ್. ಜುಕರ್‌ಬರ್ಗ್ ಅವರು, ಕಳೆದ ಎಂಟು ವರ್ಷಗಳಲ್ಲಿ ತಮ್ಮ ಫೇಸ್‌ಬುಕ್ ಖಾತೆಯನ್ನು ಐದು ಬಾರಿ ಅಮಾನತುಗೊಳಿಸಲಾಗಿದೆ ಎಂದು ದೂರಿದ್ದಾರೆ. ಅವರ ಹೆಸರೂ ಫೇಸ್ ಬುಕ್ ಸ್ಥಾಪಕರ ಹೆಸರೂ ಒಂದೇ ಆಗಿರುವುದೇ ಈ ಎಲ್ಲ ಗೊಂದಲಗಳಿಗೆ ಕಾರಣ. ಪ್ರತಿ ಬಾರಿಯೂ, ಅವರು ಫೇಸ್‌ಬುಕ್ ಖಾತೆ ಓಪನ್ ಮಾಡಿದೊಡನೆ, ಅವರು ಫೇಸ್ ಬುಕ್ ಸ್ಥಾಪಕ ಜುಕರ್ ಬರ್ಗ್ ಹೆಸರಲ್ಲಿ ನಕಲಿ ಖಾತೆ ತೆರೆದು, ಸಂಸ್ಥೆಯ ಸಂಸ್ಥಾಪಕನಂತೆ ನಟಿಸುತ್ತಿದ್ದಾರೆ ಎಂಬ ಆರೋಪ ಹೊರಿಸಿ, ಅವರ ಖಾತೆಯನ್ನು ನಿರ್ಬಂಧಿಸಲಾಗುತ್ತಿತ್ತು.
“ಈ ಪದೇ ಪದೇ ಆಗುತ್ತಿರುವ ನಿಷೇಧವು ನನ್ನ ವೃತ್ತಿ ಬದುಕಿಗೆ ಹಾನಿ ಮಾಡಿದ್ದಲ್ಲದೆ, ಸಾವಿರಾರು ಡಾಲರ್‌ಗಳಷ್ಟು ವ್ಯವಹಾರ ನಷ್ಟಕ್ಕೆ ಕಾರಣವಾಗಿದೆ” ಎಂದು ಅವರು ಆರೋಪಿಸಿದ್ದಾರೆ. ತಮ್ಮ ಕಾನೂನು ಸೇವೆಗಳನ್ನು ಪ್ರಚಾರ ಮಾಡಲು ಫೇಸ್‌ಬುಕ್‌ನಲ್ಲಿ ಸುಮಾರು 11,000 ಡಾಲರ್ (ಅಂದಾಜು 8.2 ಲಕ್ಷ ರೂಪಾಯಿ) ಮೌಲ್ಯದ ಜಾಹೀರಾತುಗಳನ್ನು ನೀಡಿದ್ದರೂ, ಖಾತೆ ನಿರ್ಬಂಧಿಸಿದ್ದರಿಂದ ನನಗೆ ವಹಿವಾಟಿನಲ್ಲಿ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ತಪ್ಪೊಪ್ಪಿಕೊಂಡ ಮೆಟಾ ಕಂಪನಿ
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮೆಟಾ ಕಂಪನಿಯು, “ತಪ್ಪಿನಿಂದಾಗಿ ಅವರ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿತ್ತು ಮತ್ತು ಅದನ್ನು ಈಗ ಪುನಃಸ್ಥಾಪಿಸಲಾಗಿದೆ” ಎಂದು ತಿಳಿಸಿದೆ. “ಈ ವಿಷಯದಲ್ಲಿ ಶ್ರೀ. ಜುಕರ್‌ಬರ್ಗ್ ಅವರ ತಾಳ್ಮೆಯನ್ನು ನಾವು ಶ್ಲಾಘಿಸುತ್ತೇವೆ ಮತ್ತು ಭವಿಷ್ಯದಲ್ಲಿ ಹೀಗಾಗದಂತೆ ತಡೆಯಲು ಪ್ರಯತ್ನಿಸುತ್ತೇವೆ,” ಎಂದು ಕಂಪನಿ ಹೇಳಿಕೆ ನೀಡಿದೆ.
“ನಾನು ಮಾರ್ಕ್ ಸ್ಟೀವನ್, ಅವನು ಮಾರ್ಕ್ ಎಲಿಯಟ್”
ತನ್ನ ಗುರುತನ್ನು ಸಾಬೀತುಪಡಿಸಲು ಫೋಟೋ ಐಡಿ, ಕ್ರೆಡಿಟ್ ಕಾರ್ಡ್ ಸೇರಿದಂತೆ ಎಲ್ಲಾ ರೀತಿಯ ಪುರಾವೆಗಳನ್ನು ಒದಗಿಸಿದ್ದೇನೆ ಎಂದು ವಕೀಲ ಜುಕರ್‌ಬರ್ಗ್ ಹೇಳಿದ್ದಾರೆ. “ನನ್ನ ಹೆಸರು ಮಾರ್ಕ್ ಸ್ಟೀವನ್ ಜುಕರ್‌ಬರ್ಗ್, ಅವನ ಹೆಸರು ಮಾರ್ಕ್ ಎಲಿಯಟ್ ಜುಕರ್‌ಬರ್ಗ್. ಟೆಕ್ ಬಿಲಿಯನೇರ್ ಪ್ರಸಿದ್ಧಿಗೆ ಬರುವ ಮೊದಲೇ ನನಗೆ ಈ ಹೆಸರಿತ್ತು,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ವಿಚಿತ್ರ ಸಮಸ್ಯೆಯನ್ನು ಜಗತ್ತಿನ ಗಮನಕ್ಕೆ ತರಲು, ಅವರು iammarkzuckerberg.com ಎಂಬ ವೆಬ್‌ಸೈಟ್ ಅನ್ನು ಸಹ ಆರಂಭಿಸಿದ್ದಾರೆ. ಇದರಲ್ಲಿ, ತಮ್ಮ ಹೆಸರಿನಿಂದಾದ ಗೊಂದಲಗಳ ಬಗ್ಗೆ ಬರೆದುಕೊಂಡಿದ್ದಾರೆ.
ಈ ಘಟನೆಯು, ಫೇಸ್‌ಬುಕ್‌ನ ಸ್ವಯಂಚಾಲಿತ ವ್ಯವಸ್ಥೆಗಳು ಪ್ರಸಿದ್ಧ ವ್ಯಕ್ತಿಗಳ ಹೆಸರುಗಳನ್ನು ಹೊಂದಿರುವ ಸಾಮಾನ್ಯ ಬಳಕೆದಾರರ ವಿಷಯದಲ್ಲಿ ಹೇಗೆ ತಪ್ಪಾಗಿ ಕಾರ್ಯನಿರ್ವಹಿಸಬಹುದು ಎಂಬುದಕ್ಕೆ ಒಂದು ಉದಾಹರಣೆಯಾಗಿದೆ.