ಹುಬ್ಬಳ್ಳಿ : ಹುಬ್ಬಳ್ಳಿ ರೈಲು ಪ್ರಯಾಣಿಕರ ಬಹುದಿನಗಳ ಕನಸು ಬಹುಬೇಗ ನನಸಾಗಲಿದೆ. ಉತ್ತರ ಕರ್ನಾಟಕ ಪ್ರಮುಖ ಭಾಗಗಳ ರೈಲು ಯೋಜನೆಗಳಾದ ಹುಬ್ಬಳ್ಳಿ-ಅಂಕೋಲಾ, ಧಾರವಾಡ-ಬೆಳಗಾವಿ, ಗದಗ-ಯಲವಗಿ ಸೇರಿದಂತೆ ಎಲ್ಲ ಯೋಜನೆಗಳನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಲಾಗುವುದು” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭರವಸೆ ನೀಡಿದ್ದಾರೆ.
ವಿಶ್ವದ ಅತೀ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಹೊಂದಿರುವ ಹುಬ್ಬಳ್ಳಿ ಸದ್ಗುರು ಸಿದ್ದಾರೂಢ ಸ್ವಾಮಿ ರೈಲು ನಿಲ್ದಾಣವನ್ನು ಹೈಟೆಕ್ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಏರಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ನಗರದ ರೈಲ್ವೆ ಸೌಧದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಲ್ಹಾದ ಜೋಶಿ, “ಹುಬ್ಬಳ್ಳಿ ರೈಲ್ವೆ ನಿಲ್ದಾಣ ಅಪಗ್ರೇಡ್ ಮಾಡಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ರೈಲ್ವೆ ಬೋರ್ಡ್ ಗೆ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು. ಹುಬ್ಬಳ್ಳಿ – ಅಂಕೋಲಾ ರೈಲ್ವೆ ಯೋಜನೆಗೆ ಅರಣ್ಯ ಇಲಾಖೆ, ವನ್ಯಜೀವಿ ಮಂಡಳಿ ಸಲಹೆ ಪಡೆಯಲಾಗಿದೆ. ಎಲ್ಲ ಸಲಹೆ ಪಡೆದು ಹೊಸ ಡಿಪಿಆರ್ ಸಿದ್ಧ ಪಡಿಸಲಾಗಿದ್ದು, 17,000 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತದೆ. ಕ್ಯಾಬಿನೆಟ್ ಅಪ್ರೂವ್ ಆದ ನಂತರ ಜಾರಿಗೆ ಬರುವ ವಿಶ್ವಾಸವಿದೆ” ಎಂದಿದ್ದಾರೆ.
”ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಪೂರಕವಾಗಿ ಧಾರವಾಡ-ಬೆಳಗಾವಿ ನಡುವಿನ ರೈಲು ಮಾರ್ಗದ ಯೋಜನೆ ಕೆಲವಡೆ ಭೂಸ್ವಾಧೀನಕ್ಕೆ ತೊಡಕುಂಟಾಗಿದೆ. ಬೆಳಗಾವಿ ಭಾಗದಲ್ಲಿ ಆಗಿರುವ ಭೂಸ್ವಾದೀನ ಸಮಸ್ಯೆಯನ್ನು ಸಂಸದ ಜಗದೀಶ ಶೆಟ್ಟರ್ ಅವರು ಬಗೆ ಹರಿಸಿದ್ದಾರೆ. ಧಾರವಾಡ ಭಾಗದಲ್ಲಿ 42 ಎಕರೆ ಭೂಸ್ವಾಧೀನಕ್ಕೆ ಕೆಲ ರೈತರಿಂದ ಆಕ್ಷೇಪ ವ್ಯಕ್ತವಾಗಿದೆ. ತಕ್ಷಣವೇ ಜಿಲ್ಲಾಉಸ್ತುವಾರಿ ಸಚಿವರು ಈ ಸಮಸ್ಯೆಯನ್ನು ಬಗೆಹರಿಸಿ ರೈಲು ಮಾರ್ಗ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
”ತುಮಕೂರು-ಚಿತ್ರದುರ್ಗ ಮಾರ್ಗದ 28 ಕಿ.ಮೀ.ಕಾಮಗಾರಿ ಮಾತ್ರ ಬಾಕಿ ಇದ್ದು, ಫೆಬ್ರುವರಿ ಒಳಗೆ ಕಾಮಗಾರಿ ಮುಗಿಯುವ ಸಾಧ್ಯತೆಯಿದೆ. ಇದರಿಂದ ಧಾರವಾಡ-ಬೆಂಗಳೂರು ಪ್ರಯಾಣದ ಅವಧಿ ಒಂದು ಗಂಟೆ ಕಡಿಮೆಯಾಗಲಿದೆ. ಅದೇ ರೀತಿ ಹುಬ್ಬಳ್ಳಿ ಭಾಗದ ಮಾರವಾಡಿ ಸಮುದಾಯದ ಬೇಡಿಕೆಯಂತೆ ಹುಬ್ಬಳ್ಳಿ-ಅಜ್ಮೀರ್ ರೈಲನ್ನು ವಾರಕ್ಕೆ ಮೂರು ಬಾರಿ ಓಡಿಸಲು ನಿರ್ಧರಿಸಲಾಗಿದೆ. ಬಾಗಲಕೋಟೆ-ಕುಡಚಿ ರೈಲು ಮಾರ್ಗದ ನಡುವಿನ ಲೋಕಾಪುರ-ದಾದನಟ್ಟಿ ಮಧ್ಯದ 6.6 ಕಿ,ಮೀ ರೈಲು ಮಾರ್ಗದ ಕಾಮಗಾರಿ 2025 ಮಾರ್ಚ್ ಒಳಗೆ ಪೂರ್ಣಗೊಳ್ಳಲಿದೆ” ಎಂದು ತಿಳಿಸಿದ್ದಾರೆ.