ಶಿವಮೊಗ್ಗ: ಈ ಬಾರಿಯ ಬಜೆಟ್ ನಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಹಲವಾರು ಬದಲಾವಣೆಗಳನ್ನು ತರಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಅವರ ಕಾಲು ನೋವು ಇದ್ದ ಹಿನ್ನೆಲೆಯಲ್ಲಿ ಇಂದು ಬಜೆಟ್ ಪೂರ್ವ ತಯಾರಿ ಸಭೆ ನಡೆಸಿದ್ದೇವೆ. ಎಲ್ಲ ಇಲಾಖೆಗಳ ಸಭೆ ನಡೆಸುತ್ತಿದ್ದೇವೆ. ಈ ಬಾರಿಯ ಬಜೆಟ್ ನಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಹಲವಾರು ಬದಲಾವಣೆಗಳನ್ನು ತರುತ್ತೇವೆ ಎಂದು ಹೇಳಿದ್ದಾರೆ.
ಈಗಾಗಲೇ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳ ಕುರಿತು ಸಿಎಂ ಗಮನಕ್ಕೆ ತಂದಿದ್ದೇವೆ, ನೀರಾವರಿ, ಆಡಳಿತ್ಮಾಕ ಯೋಜನೆಗಳ ಬಗ್ಗೆ ಕೂಡ ಗಮನಕ್ಕೆ ತರಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಮಧ್ಯೆ ಹೊಂದಾಣಿಕೆಯಾಗುತ್ತಿಲ್ಲ. ಹೀಗಾಗಿ ಹೊಸ ಜಿಲ್ಲಾಸ್ಪತ್ರೆ ಬೇಕೆಂದು ನಾನು ಸಚಿವ ದಿನೇಶ್ ಗುಂಡೂವಾರ್ ಬಳಿ ಮನವಿ ಮಾಡಿದ್ದೇನೆ. ಅವರು ಆಸ್ಪತ್ರೆಗೆ ಜಾಗ ಬೇಕೆಂದು ಕೇಳಿದ್ದಾರೆ ಎಂದು ಹೇಳಿದ್ದಾರೆ.
ವಿಐಎಸ್ಎಲ್ ವಿಚಾರದ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ರಾಜ್ಯವನ್ನು ಆಳಿದ್ದಾರೆ. ಅವರಿಗೆ ಎಲ್ಲವೂ ಗೊತ್ತಿದೆ. ಆದರೆ, ರಾಜ್ಯಕ್ಕೆ ಮೋಸ ಆಗುತ್ತಿರುವುದು ಅವರ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ಅವರ 2028ಕ್ಕೆ ಕಾಂಗ್ರೆಸ್ ಸರ್ಕಾರ ಉರುಳುತ್ತೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿ ಭವಿಷ್ಯ ಹೇಳುವರು ಒಬ್ಬರಲ್ಲ, ಬೇಕಾದಷ್ಟು ಜನರಿದ್ದಾರೆ. ಅವರೆಲ್ಲ ಬೇರೆ ಬೇರೆ ಕುಳಿತು ಭವಿಷ್ಯ ಹೇಳಲಿ. ಮತದಾರನ ಭವಿಷ್ಯ ನಿಮ್ಮ ಕೈಯಲ್ಲಿ ಇಲ್ಲ. ಅದು ಅವರ ಕೈಯಲ್ಲಿ ಇದೆ ಎಂದು ಹೇಳಿದ್ದಾರೆ.