ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಎರಡು ಕಂಚಿನ ಪದಕಗಳಿಗೆ ಮುತ್ತಿಕ್ಕುವ ಮೂಲಕ ಭಾರತದ ಶೂಟರ್ ಮನು ಭಾಕರ್ (Manu Bhaker) ಹೊಸ ಇತಿಹಾಸ ಬರೆದಿದ್ದಾರೆ.
ಬ್ಯಾಕ್ ಟು ಬ್ಯಾಕ್ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಈ ವಿಶೇಷ ದಾಖಲೆ ಬರೆದಿರುವುದು ಇನ್ನೂ ವಿಶೇಷ. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಯಾವುದೇ ಸ್ಪರ್ಧಿ ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದಿರಲಿಲ್ಲ. ಆದರೆ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಎರಡು ಪದಕಗಳನ್ನು ಗೆಲ್ಲುವ ಮೂಲಕ ಮನು ಭಾಕರ್ ಐತಿಹಾಸಿಕ ದಾಖಲೆ ಬರೆದು ಭಾರತೀಯರ ಮನದಲ್ಲಿ ಅಚ್ಚಳಿಯದೆ ನೆಲೆಯೂರಿದ್ದಾರೆ.
ಮನು ಭಾಕರ್ ಮಹಿಳಾ ಸಿಂಗಲ್ಸ್ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಅಲಂಕರಿಸುವ ಮೂಲಕ ಕಂಚಿನ ಪದಕ ಗೆದ್ದಿದ್ದರು. ಈ ಪದಕದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಪದಕದ ಖಾತೆ ತೆರೆದಿದ್ದರು. ಪ್ಯಾರಿಸ್ ಒಲಿಂಪಿಕ್ಸ್ ನ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಮನುಭಾಕರ್ ಹಾಗೂ ಸರಬ್ಜೋತ್ ಸಿಂಗ್ 2ನೇ ಪದಕ ಗೆದ್ದಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದಾರೆ.
22 ವರ್ಷದ ಮನು ಭಾಕರ್ 2023ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದಕ್ಕೂ ಮುನ್ನ ಏಷ್ಯನ್ ಗೇಮ್ಸ್ 2022 ರಲ್ಲೂ 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನ 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಮೂಲಕವೇ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದರು. ಈಗ ಎರಡು ಕಂಚನಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಮನು ಭಾಕರ್ ಸಾಧನೆಗೆ ಇಡೀ ಭಾರತವೇ ಹಾರೈಸುತ್ತಿದೆ.