ಆಳ್ವಾರ್: ರಾಜಸ್ಥಾನದ ಆಳ್ವಾರ್ ಜಿಲ್ಲೆಯಲ್ಲಿ ಬಾಡಿಗೆ ಮನೆಯೊಂದರ ಡ್ರಮ್‌ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಈ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದ್ದ ಇದೇ ರೀತಿಯ ಕೊಲೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಅಚ್ಚರಿಯೆಂದರೆ, ವ್ಯಕ್ತಿಯ ಮೃತದೇಹ ಪತ್ತೆಯಾದಾಗಿನಿಂದ ಆತನ ಪತ್ನಿ ಮತ್ತು ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ತಿಜಾರಾ ಜಿಲ್ಲೆಯ ಆದರ್ಶ್ ಕಾಲೋನಿಯಲ್ಲಿ ನಡೆದಿದೆ. ಮನೆಯ ಮಾಲೀಕರಾದ ವೃದ್ಧೆಯೊಬ್ಬರು ಮೊದಲ ಮಹಡಿಯಲ್ಲಿ ಕೆಲಸಕ್ಕೆಂದು ಹೋದಾಗ ವಿಪರೀತ ದುರ್ವಾಸನೆ ಬರುತ್ತಿತ್ತು. ವಾಸನೆ ತಡೆಯಲಾಗದೇ ಅವರು ಹಿಂತಿರುಗಿ ಬಂದಿದ್ದಾರೆ. ನಂತರ ಅನುಮಾನದ ಮೇರೆಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮನೆಯ ಮಾಳಿಗೆಯಲ್ಲಿ ನೀಲಿ ಬಣ್ಣದ ಡ್ರಮ್‌ವೊಂದರಲ್ಲಿ ಮೃತದೇಹ ಪತ್ತೆಯಾಗಿದೆ. ದುರ್ವಾಸನೆ ಹೊರಬಾರದಂತೆ ಡ್ರಮ್‌ನ ಬಾಯಿ ಮೇಲೆ ಕಲ್ಲು ಇಡಲಾಗಿತ್ತು. ಮೃತ ವ್ಯಕ್ತಿ ಉತ್ತರ ಪ್ರದೇಶದ ಮೂಲದವನಾಗಿದ್ದು, ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ. ಆತನನ್ನು ಹನ್ಸ್‌ರಾಜ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ವಿವರಣೆ ನೀಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್, “ಆದರ್ಶ್ ಕಾಲೋನಿಯ ಮನೆಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ನಮಗೆ ವರದಿ ಬಂದಿತ್ತು. ನಮ್ಮ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ, ಮನೆಯ ಮೇಲ್ಛಾವಣಿಯ ಮೇಲಿದ್ದ ನೀಲಿ ಡ್ರಮ್‌ನಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತನನ್ನು ಹನ್ಸ್‌ರಾಜ್ ಅಲಿಯಾಸ್ ಸೂರಜ್ ಎಂದು ಗುರುತಿಸಲಾಗಿದೆ” ಎಂದಿದ್ದಾರೆ.
“ಮೃತ ವ್ಯಕ್ತಿ ಉತ್ತರ ಪ್ರದೇಶದ ನಿವಾಸಿಯಾಗಿದ್ದು, ಕಿಸನ್‌ಗಢ ಬಾಸ್ ಪ್ರದೇಶದಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ಒಂದೂವರೆ ತಿಂಗಳ ಹಿಂದೆ ಈ ಮನೆಯನ್ನು ಬಾಡಿಗೆಗೆ ಪಡೆದಿದ್ದ. ತನ್ನ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಘಟನೆ ನಡೆದಾಗಿನಿಂದ ಹನ್ಸ್‌ರಾಜ್‌ನ ಪತ್ನಿ ಮತ್ತು ಮಕ್ಕಳು ನಾಪತ್ತೆಯಾಗಿದ್ದಾರೆ. ವಿಧಿವಿಜ್ಞಾನ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಸಾಕ್ಷಿಗಳನ್ನು ಸಂಗ್ರಹಿಸುತ್ತಿದೆ” ಎಂದು ಅವರು ಹೇಳಿದ್ದಾರೆ.
ಈ ಮೃತದೇಹ ಎಷ್ಟು ದಿನಗಳಿಂದ ಡ್ರಮ್‌ನಲ್ಲಿತ್ತು ಅಥವಾ ಕೊಲೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಮೃತನ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ.
ಇದೇ ರೀತಿಯ ಘಟನೆಯು ಈ ವರ್ಷದ ಮಾರ್ಚ್‌ನಲ್ಲಿ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿತ್ತು. ಅಲ್ಲಿ ವ್ಯಕ್ತಿಯೊಬ್ಬನ ದೇಹವನ್ನು ಆತನ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ತುಂಡುಗಳನ್ನಾಗಿ ಮಾಡಿ ಕತ್ತರಿಸಿ, ಡ್ರಮ್‌ನಲ್ಲಿ ತುಂಬಿ ಮೇಲೆ ಸಿಮೆಂಟ್ ಹಾಕಿದ್ದರು. ಈ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.