ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಸಂಭವಿಸಿದ್ದ ಮಾಂಜ್ರಾ ಪ್ರವಾಹದಿಂದಾಗಿ ಲಕ್ಷಾಂತರ ಮೌಲ್ಯದ ಬೆಳೆ ಸರ್ವನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಸಾವಿರಾರು ಎಕರೆಯಲ್ಲಿ ಪ್ರವಾಹದ ನೀರು ಬರೋಬ್ಬರಿ 10 ದಿನಗಳ ಕಾಲ ನಿಂತುಕೊಂಡ ಪರಿಣಾಮ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ. ಸೋಯಾ, ಕಬ್ಬು, ಹೆಸರು, ತೊಗರಿ ಸೇರಿದಂತೆ ಎಲ್ಲಾ ಬೆಳೆಗಳು ಕೊಳೆತು ಕಪ್ಪಾಗಿ ಹೋಗಿದೆ.
ಹುಲಸೂರು, ಭಾಲ್ಕಿ, ಔರಾದ್, ಬೀದರ್ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಲಕ್ಷ ಲಕ್ಷ ಎಕರೆ ಬೆಳೆಗಳು ಮಾಂಜ್ರಾ ಪ್ರವಾಹದ ಪಾಲಾಗಿದೆ. ಬೀದರ್ ತಾಲೂಕಿನ ಹಿಪ್ಪಳಗಾಂವ್ ಗ್ರಾಮದ ಕಲ್ಯಾಣರಾವ್ ಪಾಟೀಲ್, ರಾಮಶೆಟ್ಟಿ ಬಿರಾದರ್ಷ, ಶಿವರಾಜ್ ಬಿರಾದರ್, ಸಂಜುಕುಮಾರ್ ದನ್ಗರ್ ಸೇರಿದಂತೆ 800ಕ್ಕೂ ಅಧಿಕ ಎಕರೆಯಲ್ಲಿ ಬೆಳೆದಿದ್ದ ಬೆಳೆಗಳು ಸರ್ವನಾಶವಾಗಿದೆ.
40 ವರ್ಷದಲ್ಲೇ ಇದೇ ಮೊದಲ ಬಾರಿ ಮಾಂಜ್ರಾ ಪ್ರವಾಹ ಬಂದಿದ್ದು, ನದಿ ದಡದಲ್ಲಿರುವ ಸಾವಿರಾರು ಎಕರೆ ಬೆಳೆಗಳು ಹಾಳಾಗಿದೆ. ಸಿದ್ದರಾಮಯ್ಯ ಮೇಲಿಂದ ಬಂದು ಮೇಲೆಯೇ ಹೋದರು. ಇಷ್ಟೊಂದು ಬೆಳೆ ಹಾನಿಯಾದರೂ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಾಗೂ ಕ್ಷೇತ್ರದ ಶಾಸಕ ಹಾಗೂ ಸಚಿವ ರಹೀಂಖಾನ್ ಒಂದು ಬಾರಿಯೂ ಬಂದಿಲ್ಲ ಎಂದು ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.