ಮಂಗಳೂರು: ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಓರ್ವರನ್ನು ವ್ಯಕ್ತಿಯೋರ್ವನು ಸಾರ್ವಜನಿಕವಾಗಿ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ವೀಡಿಯೋ ವೈರಲ್ ಆಗಿದೆ.
ವಾಹನ ನಿಬಿಡವಾದ ಸ್ಥಳದಲ್ಲಿ ಮಹಿಳೆಯರೀರ್ವರು ರಸ್ತೆ ದಾಟಲು ಯತ್ನಿಸುತ್ತಿದ್ದರು. ಈ ವೇಳೆ ಸಂಚರಿಸುತ್ತಿದ್ದ ವಾಹನಗಳನ್ನು ನಿಲ್ಲಿಸಲು ಪೊಲೀಸ್ ಕಾನ್‌ಸ್ಟೇಬಲ್ ಸ್ಪಷ್ಟವಾಗಿ ಸಂಕೇತ ನೀಡಿದ್ದರು. ಆದರೆ ಈ ವ್ಯಕ್ತಿ ಪೊಲೀಸ್ ಸಂಕೇತವನ್ನು ಧಿಕ್ಕರಿಸಿ ತನ್ನ ದ್ವಿಚಕ್ರ ವಾಹನವನ್ನು ಮುಂದಕ್ಕೆ ಚಲಾಯಿಸಿದ್ದಾನೆ. ಆಗ ಪೊಲೀಸ್ ತಡೆಯಲು ಹೋದಾಗ ಆತನಿಗೆ ಏಟು ಬಿದ್ದಂತಾಗಿದೆ.
ಆದ್ದರಿಂದ ಆ ವ್ಯಕ್ತಿ ವಾಹನ ನಿಲ್ಲಿಸಿ ಬಂದು ಕರ್ತವ್ಯದಲ್ಲಿದ್ದ ಪೊಲೀಸ್ ಅವರನ್ನು ಸಾರ್ವಜನಿಕವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆ. ಪೊಲೀಸ್ ಕಾನ್‌ಸ್ಟೇಬಲ್ ಆತನೊಂದಿಗೆ ಶಾಂತಿಯುತವಾಗಿ ವರ್ತಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸುತ್ತಿದ್ದರೂ, ಆತ ಅದನ್ನು ಕೇಳದೆ, ಧ್ವನಿಯೆತ್ತರಿಸಿ ಮಾತನಾಡುತ್ತಿದ್ದನು. ಘಟನೆಯ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಇದರ ವೀಡಿಯೋ ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿಯವರು ಘಟನೆ ನಡೆದ ಸಂದರ್ಭದ ಸಿಸಿ ಕ್ಯಾಮರಾ ದೃಶ್ಯವನ್ನು ಪರಿಶೀಲನೆ ನಡೆಸಿದ್ದು, ಪೊಲೀಸ್ ಕಾನ್‌ಸ್ಟೇಬಲ್ ಮಾಡಿದ್ದರಲ್ಲಿ ತಪ್ಪೇನೂ ಇಲ್ಲ. ಆದ್ದರಿಂದ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದಿದ್ದಾರೆ.
ಮಂಗಳೂರಿನ ಪೊಲೀಸರು ಅಂತಹ ಕೆಲಸವನ್ನೂ ಮಾಡಲಾರದಷ್ಟು ಅಸಹಾಯಕರಾಗಿದ್ದಾರೆ. ಜಿಲ್ಲೆಯಲ್ಲಿ ಏಕೆ ಈ ರೀತಿಯ ಪರಿಸ್ಥಿತಿ ಇದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.



















