ಮಂಗಳೂರು : ನಕಲಿ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಓರ್ವ ತಲೆಮರೆಸಿಕೊಂಡ ಘಟನೆ ತೊಕ್ಕೊಟ್ಟಿನ ಹಣಕಾಸು ಸಂಸ್ಥೆಯೊಂದರಲ್ಲಿ ನಡೆದಿದೆ.
ಮಹಾರಾಷ್ಟ್ರ ಮೂಲದ ವಿಕ್ರಮ್, ಹರೇಕಳದ ಇಸ್ಮಾಯಿಲ್, ಮುಹಮ್ಮದ್ ಮಿಸ್ಬಾ, ಕಾಟಿಪಳ್ಳದ ಉಮರ್ ಫಾರೂಕ್, ಉಳ್ಳಾಲ ಮೇಲಂಗಡಿಯ ಇಮ್ತಿಯಾಝ್, ಮಂಚಿಲದ ಝಹೀಮ್ ಅಹ್ಮದ್ ಬಂಧಿತರಾಗಿದ್ದು, ಹೆಜಮಾಡಿಯ ನೌಫಾಲ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ನ.24ರ ಸಂಜೆ 5 ಗಂಟೆ ಹೊತ್ತಿಗೆ ಉಳ್ಳಾಲ ಮೇಲಂಗಡಿಯ ನಿವಾಸಿ ಇಮ್ತಿಯಾಝ್ ಎಂಬಾತ ಇದೇ ಹಣಕಾಸು ಸಂಸ್ಥೆಗೆ ಬಂದಿದ್ದು 55 ಗ್ರಾಂ ತೂಕದ ಎರಡು ಚೈನ್ ಮತ್ತು ಒಂದು ಬ್ರಾಸ್ಲೇಟ್ ಅಡವಿಟ್ಟು 4 ಲಕ್ಷ 80 ಸಾವಿರ ರೂಪಾಯಿ ಸಾಲ ಕೊಡುವಂತೆ ತಿಳಿಸಿದ್ದಾನೆ. ಆಭರಣ ಪರಿಶೀಲಿಸಿದಾಗ ಅದರಲ್ಲೂ 916 ಸಂಕೇತ ಮತ್ತು ಓರೆ ಕಲ್ಲಿಗೆ ಉಜ್ಜಿದಾಗ ಚಿನ್ನವೆಂದೇ ಕಂಡುಬಂದಿದೆ. ಚಿನ್ನ ಖರೀದಿ ಬಗ್ಗೆ ವಿಚಾರಿಸಿದಾಗ ದುಬೈಯ ಚಿನ್ನವೆಂದು ತಿಳಿಸಿದ್ದಾಗಿ ಹೇಳಲಾಗಿದೆ.
ಆತನ ಮಾತಿನಿಂದ ಅನುಮಾನಗೊಂಡ ಸಂಸ್ಥೆಯ ಮಾಲಕ ದಿನೇಶ್ ರೈ ಅವರು ಇಮ್ತಿಯಾಝ್ ನೀಡಿದ ಆಭರಣ ಮತ್ತು ನ.22ರಂದು ಝಹೀಮ್ ಅಹ್ಮದ್ ಅಡವಿಟ್ಟಿದ್ದ ಆಭರಣಗಳನ್ನು ಮಂಗಳೂರಲ್ಲಿ ಚಿನ್ನದ ಕೆಲಸ ಮಾಡುವ ತನ್ನ ಸ್ನೇಹಿತ ಉದಯ್ ಆಚಾರ್ಯ ಎಂಬವರ ಬಳಿ ಹೋಗಿ ಪರೀಕ್ಷಿಸಿದ್ದಾರೆ. ಈ ವೇಳೆ ಆಭರಣಗಳನ್ನು ಆ್ಯಸಿಡ್ ಲ್ಲಿನ ಮುಳುಗಿಸಿ ಬಿಸಿ ಮಾಡಿದಾಗ ನೊರೆ ಬಂದಿದ್ದು ನಕಲಿ ಎನ್ನುವುದು ಬೆಳಕಿಗೆ ಬಂದಿದೆ.
ಸದ್ಯ ಬಂಧಿತ ಆರೋಪಿಗಳಿಂದ ಆರು ಮೊಬೈಲ್ ಫೋನ್, 47,000 ರೂಪಾಯಿ ನಗದು ಮತ್ತು 9 ಕ್ಯಾರೇಟ್ ನ 141 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಮಣಿಪಾಲ | ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ; ಹೊತ್ತಿ ಉರಿದ ಹೊಟೇಲ್



















