ಮಂಗಳೂರು : ತುರ್ತು ಚಿಕಿತ್ಸೆಗಾಗಿ ಗಂಭೀರ ಗಾಯಾಳುವನ್ನು ಹೊತ್ತು ಮಂಗಳೂರಿಗೆ ಸಾಗುತ್ತಿದ್ದ ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ಅಡ್ಡಿಪಡಿಸಿದ ದ್ವಿಚಕ್ರ ವಾಹನ ಸವಾರನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಗುರುವಾರ ಮಧ್ಯಾಹ್ನ ಬಿ.ಸಿ.ರೋಡ್‌ನ ಎನ್‌ಜಿ ಸರ್ಕಲ್ ಬಳಿ ನಡೆದಿದೆ.
ಗುರುವಾರ ಮಧ್ಯಾಹ್ನ ಬಿಸಿಲೆ ಘಾಟ್‌ನಲ್ಲಿ ನಡೆದ ಅಪಘಾತದ ಗಾಯಾಳುವೊಬ್ಬರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ತುರ್ತು ಚಿಕಿತ್ಸೆ ನೀಡಿದ ವೈದ್ಯರು, ಗಾಯಾಳುವಿನ ಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದ್ದರು.
ಇದರಂತೆ ಆಂಬ್ಯುಲೆನ್ಸ್ ಮೂಲಕ ಗಾಯಾಳುವನ್ನು ಪುತ್ತೂರಿನಿಂದ ಮಂಗಳೂರಿಗೆ ಕರೆದೊಯ್ಯಲಾಗುತ್ತಿತ್ತು. ಮಧ್ಯಾಹ್ನ ಸುಮಾರು 1.30ರ ಸುಮಾರಿಗೆ ಆಂಬ್ಯುಲೆನ್ಸ್ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ನ ಎನ್‌ಜಿ ಸರ್ಕಲ್ ತಲುಪುತ್ತಿದ್ದಾಗ, ಸೈರನ್ ಶಬ್ದ ಕೇಳುತ್ತಿದ್ದರೂ ಕೂಡಾ ಆಂಬ್ಯುಲೆನ್ಸ್‌ನ ಮುಂದುಗಡೆ ಇದ್ದ KA.19.EK.0696 ನೋಂದಣಿಯ ದ್ವಿಚಕ್ರ ವಾಹನ ಸವಾರ ದಾರಿ ಬಿಡಲು ನಿರಾಕರಿಸಿದ್ದಾನೆ. ತುರ್ತು ಸಂದರ್ಭದಲ್ಲಿ ಗಾಯಾಳುವನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್‌ಗೆ ಸವಾರನು ಬೇಕಂತಲೇ ಅಡಚಣೆ ಉಂಟುಮಾಡಿದ್ದಾನೆ.
ಆಂಬ್ಯುಲೆನ್ಸ್ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ವ್ಯಕ್ತಿಯನ್ನು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ, 38 ವರ್ಷ ವಯಸ್ಸಿನ ಮಹಮ್ಮದ್ ಮನ್ಸೂರು ಎಂದು ಗುರುತಿಸಲಾಗಿದೆ. ಈ ಸಂಬಂಧ ಬಂಟ್ವಾಳ ನಗರ ಪೊಲೀಸರು ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮಹಮ್ಮದ್ ಮನ್ಸೂರ್ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಸಾರಾಯಿ ನಿಷೇಧಿಸಿ, ನಮ್ಮ ಕುಟುಂಬಗಳನ್ನು ಬದುಕಿಸಿ : ಬೀದಿಗಿಳಿದು ನಾರಿಮಣಿಯರ ಪ್ರತಿಭಟನೆ



















