ಮಂಗಳೂರು : ಮನೆ ಆವರಣದಲ್ಲಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವೊಂದು 15 ಅಡಿ ಬಾವಿಗೆ ಬಿದ್ದಿತ್ತು. ಆ ಮಗುವನ್ನು ಸ್ಥಳೀಯ ಯುವಕರು ಜೀವದ ಹಂಗು ತೊರೆದು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ಮಂಗಳೂರಿನ ದೇರಳಕಟ್ಟೆ ಬೆಳ್ಮ ಗ್ರಾಮದ ಮಾರಿಯಮ್ಮಗೋಳಿ ದೈವಸ್ಥಾನದ ಸಮೀಪ ನಡೆದಿದೆ.
ಗುರುಪ್ರಸಾದ್ ಎಂಬವರ ಮಗಳಾದ ಎರಡೂವರೆ ವರ್ಷ ವಯಸ್ಸಿನ ಹಿಮಾನಿಯನ್ನು ರಕ್ಷಿಸಲಾಗಿದೆ. ಮನೆಮಂದಿ ಅಂಗಳದಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಮಗು ಆಟವಾಡುತ್ತಾ ಮನೆ ಆವರಣದಲ್ಲಿನ ತೆರೆದ ಬಾವಿಯೊಳಗೆ ಬಿದ್ದಿತ್ತು. 15 ಅಡಿ ಆಳದ ನೀರಿದ್ದ ಬಾವಿಯೊಳಗೆ ಬಿದ್ದ ಮಗುವನ್ನು ತಕ್ಷಣ ಚಿಕ್ಕಪ್ಪ ಜೀವನ್ ಅವರು ಹಗ್ಗ ಹಾಕಿ ರಕ್ಷಿಸಲು ಬಾವಿಗೆ ಇಳಿದಿದ್ದರು.
ಅವರಿಗೆ ಈಜು ಬಾರದೇ ಇದ್ದಿದ್ದರಿಂದಾಗಿ ಹಗ್ಗದ ಸಹಾಯದಲ್ಲಿ ನಿಂತು ಮಗುವಿನ ಕೈಯನ್ನು ಹಿಡಿದುಕೊಂಡು ಮೇಲೆ ಬರಲು ಸಾಧ್ಯವಾಗದೇ ಅಲ್ಲೇ ಉಳಿದಿದ್ದರು. ಅದಾಗಲೇ ಒಂದು ಬಾರಿ ನೀರಿನೊಳಗೆ ಹೋಗಿ ಮಗು ಮೇಲೆ ಬಂದಿತ್ತು. ಈ ವೇಳೆ ಟೀಂ ಪೆಲತ್ತಡಿ ಫ್ರೆಂಡ್ಸ್ನ ಯುವಕರು ಆಟವಾಡಲು ಗದ್ದೆಗೆ ಹೋಗುವ ಸಂದರ್ಭ ಮಗು ಬಾವಿಗೆ ಬಿದ್ದಿರುವುದನ್ನು ಗಮನಿಸಿ ಮಗುವನ್ನು ಮೇಲೆತ್ತಲು ಸಹಾಯ ಮಾಡಿದ್ದಾರೆ. ಯುವಕರ ಮಾನವೀಯ ಕಾರ್ಯ ಮತ್ತು ಸಮಯಪ್ರಜ್ಞೆ ಇದೀಗ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.
ಇದನ್ನೂ ಓದಿ : ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ, ಇದು ನಿಮ್ಮ ಗುರಿಯೂ ಆಗಲಿ | ಸಿಎಂ ಸಿದ್ದರಾಮಯ್ಯ ಕರೆ



















