ಮಂಗಳೂರು: ನಗರದ ಪುರಭವನ ಬಳಿಯಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆ ಇನ್ನು ಮುಂದೆ ಡಾ.ಅಮ್ಮೆಂಬಳ ಬಾಳಪ್ಪ ರಸ್ತೆ. ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಸ್ತೆಯ ನಾಮಫಲಕವನ್ನು ಅನಾವರಣಗೊಳಿಸಲಾಗಿದೆ.
ನಾಮಕರಣದ ಅಂಗವಾಗಿ ಪೊಲೀಸ್ ಲೇನ್‌ನ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೈಭವ ಮೇಲೈಸಿತು. ರಸ್ತೆಗೆ ಬಾಳಪ್ಪ ಅವರ ಹೆಸರಿಡಲು ಅನುಮತಿ ದೊರಕಿಸಿಕೊಟ್ಟವರನ್ನು ಗೌರವಿಸಲಾಯಿತು. ಸನಾತನ ನಾಟ್ಯಾಲಯದ ಭರತನಾಟ್ಯ ಕಾರ್ಯಕ್ರಮ ಮುದ ನೀಡಿತು.
ರಸ್ತೆಯ ನಾಮಫಲಕ ಅನಾವರಣ ಮಾಡಿ ಮಾತನಾಡಿದ ಸಂಸದ ಬ್ರಿಜೇಶ್ ಚೌಟ, ಬ್ರಿಟಿಷರ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಲು ಜನರನ್ನು ಒಗ್ಗೂಡಿಸಿದ ಸ್ವಾತಂತ್ರ್ಯ ಹೋರಾಟಗಾರ ಬಾಳಪ್ಪ ಅವರ ಹೆಸರಿನಲ್ಲಿ ನಗರದ ಪ್ರಮುಖ ರಸ್ತೆಯೊಂದು ಕಂಗೊಳಿಸುತ್ತಿರುವುದು ಸಂತೋಷದ ವಿಷಯ. ಮಂಗಳೂರಿಗೆ ಸಂಬಂಧಿಸಿ ಇದು ವಿಶೇಷ ದಿನ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಬಾಳಪ್ಪ ಅವರಂಥ ಹೋರಾಟಗಾರರ ಹೆಸರು ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಎಲ್ಲೂ ಕಾಣಿಸದೆ ಇರುವುದು ದುಃಖದ ವಿಷಯ. ನಗರದ ಹೃದಯ ಭಾಗದಲ್ಲಿ ಬಾಳಪ್ಪ ಅವರ ಹೆಸರು ಕಾಣಿಸುತ್ತಿರುವುದರಿಂದ ಮುಂದಿನ ತಲೆಮಾರಿಗೆ ಅವರ ಸಾಧನೆಯ ಬಗ್ಗೆ ತಿಳಿಯಲು ಅನುಕೂಲ ಆಗಲಿದೆ ಎಂದಿದ್ದಾರೆ.



















