ಮಂಗಳೂರು: ಇಲ್ಲಿನ (Mangaluru) ಉಳ್ಳಾಲ ಹತ್ತಿರದ ಕೋಟೆಕಾರು ಬ್ಯಾಂಕ್ ನಲ್ಲಿ ನಡೆದಿದ್ದ ದರೋಡೆ (Bank Robarry) ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈಗಾಗಲೇ ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೊಂಡಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಖದೀಮರ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಖದೀಮರು ಉತ್ತರ ಭಾರತದತ್ತ ಹೋಗಿದ್ದಾರೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ. ಹೀಗಾಗಿ ಪೊಲೀಸರು ಉತ್ತರ ಭಾರತದತ್ತ ಮುಖ ಮಾಡಿದ್ದಾರೆ. ಆರೋಪಿಗಳು ಕದ್ದ ಚಿನ್ನವನ್ನು ಫಿಯೆಟ್ ಕಾರಿನಲ್ಲಿ ಸಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ, ಆರೋಪಿಗಳು ಕದ್ದ ಚಿನ್ನವನ್ನು ಮತ್ತೊಂದು ಕಾರು ಚೆವ್ರೊಲೆಟ್ನಲ್ಲಿ ಸಾಗಿಸಿದ್ದಾರೆ ಎನ್ನಲಾಗಿದೆ. ಮಂಗಳೂರು ಕಡೆ ಚೆವ್ರೊಲೆಟ್ ಕಾರಿನಲ್ಲಿ ಬಂದ ಮೂವರು ದರೋಡೆಕೋರರು ಬ್ಯಾಂಕ್ ದರೋಡೆ ಮಾಡಿ, ಮಂಗಳೂರಿನಲ್ಲಿ ಮೊಬೈಲ್ ಬಿಸಾಕಿ ಬಂಟ್ವಾಳ ಕಡೆ ತೆರಳಿದ್ದಾರೆ ಎಂಬ ಶಂಕೆ ಪೊಲೀಸರದ್ದಾಗಿದೆ.
ನಂತರ ವಿಟ್ಲ ಮೂಲಕ ಕೇರಳ ಗಡಿ ತಲುಪಿ ಕೇರಳದ ಗ್ರಾಮೀಣ ಪ್ರದೇಶ ತಲುಪಿರುವ ಸಾದ್ಯತೆ ಕೂಡ ಇದೆ. ಎರಡು ದಿಕ್ಕಿನಲ್ಲಿ ಸಾಗಿದ ಕಾರುಗಳು ಕೆಲವೇ ಗಂಟೆಗಳಲ್ಲಿ ಕೇರಳದಲ್ಲೇ ಸಂದಿಸಿರುವ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ. ಹೀಗಾಗಿ ಪೊಲೀಸರ ಮತ್ತೊಂದು ತಂಡ ಕೇರಳದಲ್ಲಿ ಬೀಡುಬಿಟ್ಟಿದೆ.