ಬೆಂಗಳೂರು: ಕಳೆದ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಮಂಗಳಮುಖಿಯ ಬರ್ಬರ ಹತ್ಯೆ ನಡೆದಿರುವ ಘಟನೆ ನಡೆದಿದೆ.
ಮಾರಕಾಸ್ತ್ರಗಳಿಂದ ಕೊಚ್ಚಿ (Transgender) ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಕೆ.ಆರ್.ಪುರಂನ ಬಸವೇಶ್ವರನಗರದ (Basaveshwarnagar) ಗಾಯತ್ರಿ ಲೇಔಟ್ನಲ್ಲಿ ನಡೆದಿದೆ. ಕೋಟ್ಯಾಧಿಪತಿ ಆಗಿದ್ದ ಹಾಗೂ ಕನ್ನಡಪರ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ ಮಂಗಳಮುಖಿ ತನುಶ್ರೀ, ಮದುವೆಯಾದ ಮೂರು ತಿಂಗಳಲ್ಲಿ ಕೊಲೆಯಾಗಿದ್ದಾರೆ.
ಮೂರು ತಿಂಗಳ ಹಿಂದೆ ಜಗನ್ನಾಥ್ ಎಂಬುವರ ಜೊತೆ ತನುಶ್ರೀ ವಿವಾಹವಾಗಿದ್ದು, ಹಣ ಮತ್ತು ಚಿನ್ನಾಭರಣಕ್ಕಾಗಿ ತನುಶ್ರೀಯನ್ನು ಮೂರು ದಿನಗಳ ಹಿಂದೆ ಕೆ.ಆರ್.ಪುರದ ಬಸವೇಶ್ವರ ನಗರದ ಗಾಯಿತ್ರಿ ಲೇಔಟ್ನ ಮನೆಯಲ್ಲಿ ಮಾರಕಾಸ್ತ್ರದಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೃತ್ಯದ ನಂತರ ಪತಿ ಜಗನ್ನಾತ್ ಹಾಗೂ ತನುಶ್ರೀ ಅವರ ಮನೆಗೆಲಸದಾಕೆ ಇಬ್ಬರೂ ಪರಾರಿ ಆಗಿದ್ದಾರೆ.
ಸಂಗಮ ಎನ್ ಜಿಓ ನಡೆಸುತ್ತಿದ್ದ ತನುಶ್ರೀ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ತನುಶ್ರೀ ಆಸ್ತಿ ಕಂಡು ಜಗನ್ನಾಥ್ ಮದುವೆ ಮಾಡಿಕೊಂಡಿದ್ದ. ಈಗ ಹಣಕ್ಕಾಗಿ ಕೊಲೆ ಬೆನ್ನಲ್ಲಿಯೇ ಪರಾರಿ ಆಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.