ಬೆಂಗಳೂರು : ಬೆಂಗಳೂರು ನಗರ ಜಿಲ್ಲಾಡಳಿತದಿಂದ ಸೋಮವಾರ ನಡೆಯಲಿರುವ 77ನೇ ಗಣರಾಜ್ಯೋತ್ಸವಕ್ಕೆ ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 10 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ. ಬಂದೋಬಸ್ತ್‌ಗೆ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಗಣರಾಜ್ಯೋತ್ಸವಕ್ಕೆ ಪೂರ್ವಭಾವಿಯಾಗಿ ಜ.22ರಿಂದ 24ರವರೆಗೆ ತಾಲೀಮು ಮಾಡಲಾಗಿದೆ. ಜ.26ರ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರು ಧ್ವಜಾರೋಹಣ ಮಾಡಿ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ನಂತರ ರಾಜ್ಯದ ಜನರಿಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ. ನಂತರ ಪಥ ಸಂಚಲನ ನಡೆಯಲಿದೆ. ಕಾರ್ಯಕ್ರಮ ವೀಕ್ಷಿಸಲು ಸುಮಾರು 10 ಸಾವಿರಕ್ಕೂ ಹೆಚ್ಚಿನ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಅತಿಗಣ್ಯರಿಗೆ ಮೂರು ಸಾವಿರ, ಆಡಳಿತಾಧಿಕಾರಿಗಳು, ಮಾಧ್ಯಮದವರಿಗೆ 3,200, ಸಾರ್ವಜನಿಕರಿಗೆ ನಾಲ್ಕು ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು, ಈ ಬಾರಿ ಪರೇಡ್‌ನಲ್ಲಿ ಒಟ್ಟು 37 ಸೇನಾ ತುಕಡಿಗಳು (troops) ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಆದರೆ, ಪ್ರತಿ ವರ್ಷದ ಜನಪ್ರಿಯ ಆಕರ್ಷಣೆಯಾಗಿರುವ ASC ಸೆಂಟರ್‌ನ ‘ಟೊರ್ನಾಡೋ’ ಬೈಕ್ ಸಾಹಸ ತಂಡ ಈ ಬಾರಿ ಪರೇಡ್‌ನಲ್ಲಿ ಭಾಗವಹಿಸುತ್ತಿಲ್ಲ. ಕಾರ್ಯಕ್ರಮದ ಸಮಯ ಮಿತಿ ಹಾಗೂ ಟಾರ್ನಡೋಸ್ ತಂಡವನ್ನು ಬೇರೆ ಕಡೆ ನಿಯೋಜಿಸಿರುವ ಕಾರಣದಿಂದಾಗಿ ಈ ಬಾರಿ ಬೈಕ್ ಸಾಹಸ ಪ್ರದರ್ಶನ ಇಲ್ಲದಂತಾಗಿದೆ.
ಮಾಣೆಕ್ ಷಾ ಪರೇಡ್ ಮೈದಾನದ ಸುತ್ತಲು 100ಕ್ಕೂ ಹೆಚ್ಚಿನ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಬಿಗಿ ಭದ್ರತೆ ಒದಗಿಸಲಾಗುತ್ತಿದೆ ಗಣ್ಯರ ಓಡಾಟ ಹೆಚ್ಚಿರುವ ಕಾರಣದಿಂದಾಗಿ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8.30ರಿಂದ 10-30ರವರೆಗೆ ಕಬ್ಬನ್ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗಿನ ಎರಡೂ ದಿಕ್ಕುಗಳಲ್ಲೂ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಇ-ಪಾಸ್ ವ್ಯವಸ್ಥೆ
ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಸುಲಭವಾಗಿ ಪಾಸ್‌ಗಳನ್ನು ನೀಡುವ ಉದ್ದೇಶದೊಂದಿಗೆ ಇ-ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಆಸಕ್ತರು ಸೇವಾವಿಂದು ಪೋರ್ಟಲ್‌ನಲ್ಲಿ ಆಧಾರ್ ಸಂಖ್ಯೆ ಸೇರಿದಂತೆ ಮತ್ತಿತರ ಸೂಕ್ತ ದಾಖಲೆಗಳನ್ನು ನೀಡಿ ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಒಟ್ಟು 2 ಸಾವಿರ ಇ-ಪಾಸ್‌ಗಳನ್ನು ನೀಡಲಾಗಿದೆ.
ಮೈದಾನದ ಪ್ರವೇಶ ದ್ವಾರದ ವಿವರ
ಗೇಟ್ 2: ಅತಿ ಗಣ್ಯ ವ್ಯಕ್ತಿಗಳು, ರಕ್ಷಣಾ ಇಲಾಖೆ, ಸರ್ಕಾರದ ಹಿರಿಯ ಅಧಿಕಾರಿಗಳು
ಗೇಟ್ 3: ಸಿಎಂ,ಡಿಸಿಎಂ, ಸಿಎಸ್, ಡಿಜಿ. ಐಜಿ, ರಕ್ಷಣಾ ಇಲಾಖೆ ಹಿರಿ ಅಧಿಕಾರಿಗಳು
ಗೇಟ್ 4: ಆಡಳಿತಾಧಿಕಾರಿಗಳು, ಮಾಧ್ಯಮದವರು
ಗೇಟ್ 5: ಸಾರ್ವಜನಿಕರು
ಇದನ್ನೂ ಓದಿ : ಭಯದ ವಾತಾವರಣ ಸೃಷ್ಟಿಸಲು ಮಾಡೆಲ್ ಹೌಸ್ಗೆ ಬೆಂಕಿ ಹಚ್ಚಲಾಗಿದೆ | ಜನಾರ್ದನ ರೆಡ್ಡಿ



















