ಮಂಡ್ಯ: ದೇವಾಲಯಕ್ಕೆ ದಲಿತರು ಪ್ರವೇಶ ಮಾಡಿದ್ದಾರೆಂದು ಉತ್ಸವ ಮೂರ್ತಿಯನ್ನೇ ಸವರ್ಣೀಯರು ಹೊರ ತಂದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹನಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾಲಭೈರವೇಶ್ವರ ದೇವಾಲಯಕ್ಕೆ ದಲಿತರು ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆಂದು ದೇಗುಲದಿಂದ ಉತ್ಸವ ಮೂರ್ತಿಯನ್ನು ಹೊರತಂದು, ದೇವಾಲಯದ ನಾಮಫಲಕ ಆಚೆ ಎಸೆದು ಸವರ್ಣೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಿಡು ಬಿಟ್ಟಿದ್ದಾರೆ.
ಈ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಸೇರಿಸಲಾಗಿದ್ದು, ಇದಕ್ಕೆ ಸವರ್ಣೀಯರು ವಿರೋಧಿಸುತ್ತಿದ್ದಾರೆ. ಈಗಾಗಲೇ ಎರಡು ಬಾರಿ ನಡೆಸಿದ ಶಾಂತಿ ಸಭೆಯೂ ವಿಫಲಾಗಿದೆ. ದಲಿತರ ದೇಗುಲ ಪ್ರವೇಶಕ್ಕೆ ಸವರ್ಣೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಗುಲ ಅವರೇ ಇಟ್ಟುಕೊಳ್ಳಲಿ, ದೇವರನ್ನು ಕೊಂಡೊಯುತ್ತೇವೆ. ಕೂಲಿ ಹಣದಿಂದ ದೇಗುಲ ನಿರ್ಮಿಸಿದ್ದೇವೆ ಎಂದು ಬೇಸರ ಹೊರಹಾಕಿದ್ದಾರೆ.
ಮಾಜಿ ಶಾಸಕ ಎಂ ಶ್ರೀನಿವಾಸ್ ಸವರ್ಣೀಯರ ಮನವೊಲಿಸಲು ಯತ್ನಿಸಿದ್ದಾರೆ. ತಹಶಿಲ್ದಾರ್, ಸಮಾಜ ಕಲ್ಯಾಣ, ಪೊಲೀಸ್ ಇಲಾಖೆ ಅಧಿಕಾರಿಗಳು ಕೂಡ ಮನವೊಲಿಕೆಗೆ ಯತ್ನಿಸಿದ್ದಾರೆ. ಆದರೆ, ಸವರ್ಣೀಯರು ಮಾತ್ರ ಒಪ್ಪುತ್ತಿಲ್ಲ ಎನ್ನಲಾಗಿದೆ. ಆದರೆ, ಉತ್ಸವ ಮೂರ್ತಿಯನ್ನು ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.