ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಯುವ ತಾರೆ ಹಾಗೂ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭಮನ್ ಗಿಲ್ ಅವರ ವ್ಯಕ್ತಿತ್ವಕ್ಕೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮಾಜಿ ಆಟಗಾರ ಹಾಗೂ ಇಂಗ್ಲೆಂಡ್‌ನ ಫುಟ್ಬಾಲ್ ದಿಗ್ಗಜ ರಿಯೋ ಫರ್ಡಿನಾಂಡ್ ಫಿದಾ ಆಗಿದ್ದಾರೆ. ಪ್ಯಾರಿಸ್‌ನಲ್ಲಿ ನಡೆದ ಭೇಟಿಯ ನಂತರ ಗಿಲ್ ಅವರ ಕುತೂಹಲ ಮತ್ತು ಸರಳತೆಯನ್ನು ಕೊಂಡಾಡಿರುವ ಫರ್ಡಿನಾಂಡ್, ಯುವ ಕ್ರಿಕೆಟಿಗನ ಗುಣಗಾನ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಸೋಮವಾರ ಪ್ಯಾರಿಸ್‌ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಟೊಟೆನ್ಹ್ಯಾಮ್ ಹಾಟ್ಸ್‌ಪುರ್ ನಡುವಿನ ಪಂದ್ಯ ವೀಕ್ಷಿಸಲು ತೆರಳಿದ್ದ ಸಂದರ್ಭದಲ್ಲಿ ಈ ಇಬ್ಬರು ಕ್ರೀಡಾ ತಾರೆಗಳ ಭೇಟಿ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಗಿಲ್ ಅವರೊಡನೆ ಕಳೆದ ಸಮಯವನ್ನು ಸ್ಮರಿಸಿಕೊಂಡಿರುವ ಫರ್ಡಿನಾಂಡ್, ತಾವು ಈವರೆಗೆ ಭೇಟಿಯಾದ ಕ್ರೀಡಾಪಟುಗಳ ಪೈಕಿ ಗಿಲ್ ಅವರಷ್ಟು ಕುತೂಹಲಕಾರಿ ಮನಸ್ಥಿತಿಯನ್ನು ಹೊಂದಿರುವವರನ್ನು ನೋಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕುತೂಹಲ ಮತ್ತು ಕಲಿಯುವ ಹಂಬಲ
ತಮ್ಮ ಭೇಟಿಯ ಕುರಿತು ಬರೆದುಕೊಂಡಿರುವ ಫರ್ಡಿನಾಂಡ್, ಗಿಲ್ ಅವರಲ್ಲಿರುವ ಕಲಿಯುವ ಹಸಿವನ್ನು ವಿಶೇಷವಾಗಿ ಗುರುತಿಸಿದ್ದಾರೆ. “ನನ್ನ ಪ್ರವಾಸಗಳ ಸಮಯದಲ್ಲಿ ನಾನು ಅನೇಕ ಕ್ರೀಡಾ ತಾರೆಗಳನ್ನು ಭೇಟಿಯಾಗುತ್ತೇನೆ. ಆದರೆ ಶುಭಮನ್ ಅವರಂತೆ ಅಷ್ಟು ವೇಗವಾಗಿ ತಮ್ಮ ಕುತೂಹಲಕಾರಿ ಮನಸ್ಸನ್ನು ನನಗೆ ಯಾರೂ ತೆರೆದಿಟ್ಟಿಲ್ಲ. ನಾವು ಕೂತು ಪಾನೀಯ ಆರ್ಡರ್ ಮಾಡಿದ ತಕ್ಷಣ, ಅವರು ನನ್ನ ಫುಟ್ಬಾಲ್ ಪ್ರಯಾಣ, ನಾಯಕತ್ವದ ಗುಣಗಳು ಮತ್ತು ಸಂಬಂಧಗಳ ನಿರ್ವಹಣೆಯ ಬಗ್ಗೆ ವಿವರವಾದ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರು,” ಎಂದು ಫರ್ಡಿನಾಂಡ್ ವಿವರಿಸಿದ್ದಾರೆ.
ಗಿಲ್ ಅವರ ಪ್ರಶ್ನೆಗಳು ಕೇವಲ ಸಾಮಾನ್ಯ ಹರಟೆಯಾಗಿರದೆ, ಒಬ್ಬ ಫುಟ್ಬಾಲ್ ಆಟಗಾರನ ಅನುಭವಗಳನ್ನು ಕ್ರಿಕೆಟ್ ಜಗತ್ತಿಗೆ ಹೇಗೆ ಅನ್ವಯಿಸಿಕೊಳ್ಳಬಹುದು ಎಂಬ ಉದ್ದೇಶವನ್ನು ಹೊಂದಿದ್ದವು ಎಂದು ಫರ್ಡಿನಾಂಡ್ ಹೇಳಿದ್ದಾರೆ. “ನನ್ನ ಮಾತುಗಳಿಂದ ಅವರು ಏನನ್ನು ಕಲಿತರು ಎಂಬುದು ನನಗೆ ತಿಳಿದಿಲ್ಲ, ಆದರೆ ಕಿರಿಯ ವಯಸ್ಸಿನಲ್ಲೇ ತಮ್ಮನ್ನು ತಾವು ಉತ್ತಮಪಡಿಸಿಕೊಳ್ಳಲು ಅವರು ನಡೆಸುವ ಅನ್ವೇಷಣೆ ಮತ್ತು ಪ್ರಶ್ನಿಸುವ ಪರಿಪಾಠ ನಿಜಕ್ಕೂ ಅದ್ಭುತ,” ಎಂದು ಇಂಗ್ಲೆಂಡ್ ಮಾಜಿ ಆಟಗಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಶಸ್ಸಿನ ನಡುವೆಯೂ ಸರಳತೆ
ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಿದ್ದರೂ, ಗಿಲ್ ಅವರಲ್ಲಿ ಯಾವುದೇ ಅಹಂ ಇಲ್ಲದಿರುವುದು ಫರ್ಡಿನಾಂಡ್ ಅವರನ್ನು ಆಕರ್ಷಿಸಿದೆ. ಸಾಮಾನ್ಯವಾಗಿ ಏನನ್ನೂ ಸಾಧಿಸದ ಅಥವಾ ಏಳಿಗೆ ಹೊಂದುತ್ತಿರುವವರಲ್ಲಿ ಕಾಣುವಂತಹ ವಿನಯತೆಯನ್ನು, ಈಗಾಗಲೇ ಉನ್ನತ ಮಟ್ಟದಲ್ಲಿರುವ ಗಿಲ್ ಪ್ರದರ್ಶಿಸಿದ್ದು ತಮಗೆ ಆಶ್ಚರ್ಯ ತಂದಿದೆ ಎಂದು ಅವರು ಹೇಳಿದ್ದಾರೆ. ಈ ಭೇಟಿಯು ತಮಗೆ ಎಷ್ಟು ಸ್ಫೂರ್ತಿ ನೀಡಿದೆ ಎಂದರೆ, ಸದ್ಯದಲ್ಲೇ ಭಾರತಕ್ಕೆ ಮತ್ತೊಮ್ಮೆ ಭೇಟಿ ನೀಡಲು ನಿರ್ಧರಿಸಿರುವುದಾಗಿ ಫರ್ಡಿನಾಂಡ್ ಸುಳಿವು ನೀಡಿದ್ದಾರೆ.
ಐಪಿಎಲ್ ಸಿದ್ಧತೆಯಲ್ಲಿ ಗಿಲ್
ಇದೇ ವೇಳೆ, ಶುಭಮನ್ ಗಿಲ್ ಅವರು ಮುಂಬರುವ ೨೦೨೬ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ ಸಜ್ಜಾಗುತ್ತಿದ್ದಾರೆ. ಮಾರ್ಚ್ 26 ರಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಅವರು ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ 2025ರ ಋತುವಿನಲ್ಲಿ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದು, 50ರ ಸರಾಸರಿಯಲ್ಲಿ 650 ರನ್ ಗಳಿಸುವ ಮೂಲಕ ಟೂರ್ನಿಯ ನಾಲ್ಕು ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಎಲ್ಲಾ ಸ್ವರೂಪದ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ಗಿಲ್, ಫುಟ್ಬಾಲ್ ದಿಗ್ಗಜರಿಂದಲೂ ಶ್ಲಾಘನೆಗೆ ಒಳಗಾಗಿರುವುದು ಅವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ : “ಕ್ರಿಕೆಟ್ ಹಿತದೃಷ್ಟಿಯಿಂದ ಭಾರತದ ವಿರುದ್ಧ ಆಡಿ”- ಪಾಕಿಸ್ತಾನಕ್ಕೆ ಬಾಂಗ್ಲಾ ಮನವಿ | ಇತ್ತ ಬಿಸಿಬಿಗೆ ದಂಡವಿಲ್ಲದೆ ಐಸಿಸಿ ರಿಲೀಫ್



















