ಲಖನೌ : ನೀರಿನಲ್ಲಿ ಮುಳುಗುತ್ತಿದ್ದ ಕಾರಿನೊಳಗೆ ಸಿಲುಕಿದ್ದ ಚಾಲಕನನ್ನು ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ನಡೆದಿದೆ.
ಎಸ್‌ಯುವಿ ಕಾರು ಚಾಲನೆ ಮಾಡುತ್ತಿದ್ದ ಶುಭಂ ತಿವಾರಿ, ಹಠಾತ್ತನೆ ರಸ್ತೆಗೆ ಬಂದ ಮಗುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸುವಾಗ ಕಾರು ಸಹಿತ ಕೆರೆಗೆ ಹೋಗಿ ಬಿದ್ದಿದ್ದಾರೆ. ಸದ್ಯ ಚಾಲಕ ಶುಭಂ ತಿವಾರಿಯನ್ನು ರಕ್ಷಿಸುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಾಹನವು ನೀರಿಗೆ ಬಿದ್ದು ಮುಳುಗಲು ಪ್ರಾರಂಭಿಸುತ್ತಿದ್ದಂತೆ ಹತ್ತಿರದಲ್ಲಿದ್ದ ಸ್ಥಳೀಯ ನಿವಾಸಿ ಫೈಜಲ್, ಕೂಡಲೇ ಕಾರ್ಯಪ್ರವೃತ್ತರಾಗಿ ಒಂದು ಕ್ಷಣವೂ ವ್ಯರ್ಥ ಮಾಡದೆ, ಮುಳುಗುತ್ತಿದ್ದ ಎಸ್‌ಯುವಿ ಕಡೆಗೆ ತನ್ನ ದೋಣಿಯನ್ನು ಚಲಾಯಿಸಿ ಕೊಳಕ್ಕೆ ಹಾರಿದ್ದಾರೆ.
ಫೈಜಲ್ ನೀರಿನ ಪ್ರವಾಹ ಮತ್ತು ವಾಹನದ ಭಾರವನ್ನು ಲೆಕ್ಕಿಸದೆ ಹೋರಾಡುತ್ತ ಚಾಲಕನನ್ನು ಸಕಾಲದಲ್ಲಿ ಹೊರ ತೆಗೆದದಿದ್ದಾರೆ. ಅವರ ತ್ವರಿತ ಮತ್ತು ನಿರ್ಭೀತ ಕ್ರಮಗಳು ತಿವಾರಿ ಅವರನ್ನು ನೀರಿನಲ್ಲಿ ಮುಳುಗದಂತೆ ರಕ್ಷಿಸಿದೆ. ಸದ್ಯ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಫೈಜಲ್ ಅವರ ಅಸಾಧಾರಣ ಧೈರ್ಯವನ್ನು ಶ್ಲಾಘಿಸುತ್ತಿದ್ದಾರೆ. ಅನೇಕರು ಅವರ ಶೌರ್ಯ ಕಾರ್ಯವನ್ನು ಅಧಿಕೃತವಾಗಿ ಗುರುತಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಸಿಎಂ–ಡಿಸಿಎಂ ಬ್ರೇಕ್‌ಫಾಸ್ಟ್ ಮಾಡಿ ಕುರ್ಚಿ ಸಂಘರ್ಷ ಬ್ರೇಕ್ ಮಾಡಿದ್ದಾರೆ | ವಚನಾನಂದ ಸ್ವಾಮೀಜಿ


















