ಚಿಕ್ಕೋಡಿ: ಗುರುವಾರ ಮದುವೆಯಾಗಬೇಕಿದ್ದ ಯುವಕ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಈ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನಡೆದಿದೆ. 31 ವರ್ಷದ ಯುವಕ ರಾಮಪ್ಪ ಹೋಸಲ್ಕಾರ ಹೃದಯಾಘಾತ (Heart Attack)ಕ್ಕೆ ಬಲಿಯಾಗಿರುವ ಯುವಕ ಎನ್ನಲಾಗಿದೆ.
ರಾಮಪ್ಪ ಅವರ ಮದುವೆ ಸೆಪ್ಟೆಂಬರ್ 5ರಂದು ನಿಗದಿಯಾಗಿತ್ತು. ಆದರೆ, ಮಂಗಳವಾರ ರಾತ್ರಿ ಯುವಕ ಫೋನ್ ನಲ್ಲಿ ಮಾತನಾಡುತ್ತಿದ್ದಾಗ ಹೃದಯಾಘವಾವಾಗಿದೆ. ಫೋನ್ ನಲ್ಲಿ ಮಾತನಾಡುತ್ತ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾನೆ. ಕೂಡಲೇ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.
ಮನೆಗೆ ಆಸರೆಯಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.