ಬೆಂಗಳೂರು: ಭಯಾನಕವಾಗಿ ಕೊಲೆ ಮಾಡಿ ಪೀಸ್ ಪೀಸ್ ಮಾಡಿ ಫ್ರಿಜ್ ನಲ್ಲಿ ಇಟ್ಟು ಪರಾರಿಯಾಗಿದ್ದ ಕೊಲೆಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಕೊಲೆ ಪ್ರಕರಣದ (Mahalakshmi Case) ತನಿಖೆ ಚುರುಕುಗೊಂಡಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಶಂಕಿತ ಆರೋಪಿ ಒಡಿಶಾದಲ್ಲಿ (Odisha) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮುಕ್ತಿರಂಜನ್ ರಾಯ್ ಆತ್ಮಹತ್ಯೆ ಮಾಡಿಕೊಂಡ ಶಂಕಿತ ಕೊಲೆಗಾರ. ಈತ ಮಹಾಲಕ್ಷ್ಮಿ ಕೊಲೆಯ ನಂತರ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಆರೋಪಿಗಾಗಿ ವೈಯಾಲಿಕಾವರ್ ಪೊಲೀಸರು ಒಡಿಶಾಗೆ ತೆರಳಲು ಮುಂದಾಗಿದ್ದರು ಎನ್ನಲಾಗಿದೆ. ಸೆ.1ರ ವರೆಗೆ ಮಹಾಲಕ್ಷ್ಮಿ ಕೆಲಸಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2 ಅಥವಾ 3 ರಂದು ಕೊಲೆ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಅಲ್ಲದೇ, ಮಹಿಳೆ ಕೆಲಸ ಮಾಡುತ್ತಿದ್ದ ಸಾಪ್ ನ ಟೀಂ ಲೀಡರ್ ಮುಕ್ತಿರಂಜನ್ ಕೂಡ ಸೆಪ್ಟೆಂಬರ್ 1ರ ನಂತರ ಕೆಲಸಕ್ಕೆ ಹೋಗಿಲ್ಲ. ಹೀಗಾಗಿ ಸಾಕಷ್ಟು ಅನುಮಾನಗಳು ಮೂಡಿದ್ದವು. ಈ ಮಧ್ಯೆ ಆರೋಪಿ ಒಡಿಶಾದಲ್ಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಅಲ್ಲಿಗೆ ಹೋಗಲು ನಿರ್ಧರಿಸಿದ್ದರು ಎನ್ನಲಾಗಿದೆ.
ಮಹಾಲಕ್ಷ್ಮೀ ಶವವನ್ನ 59 ತುಂಡಾಗಿ ಮಾಡಿದ್ದ. ಆತನನ್ನು ಕೂಡಲೇ ಬಂಧಿಸದಿದ್ದರೆ, ಅಪಾಯ ಸಾಧ್ಯತೆ ಎಂದು ಮನೋವೈದ್ಯರು ಸೂಚಿಸಿದ್ದರು. ಹೀಗಾಗಿ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಆದರೆ, ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.