ನವದೆಹಲಿ: ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಗುರುಗ್ರಾಮ-ದೆಹಲಿ ಹೆದ್ದಾರಿಯಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಸಿಲುಕಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅಲ್ಲಿ 20 ಕಿ.ಮೀ.ವರೆಗೂ ಸಂಚಾರ ದಟ್ಟಣೆ ಉಂಟಾಗಿದ್ದೂ ಭಾರೀ ಸುದ್ದಿಯಾಗಿತ್ತು. ಈ ನಡುವೆ, ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬರು ಮಾಡಿದ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.
ಟ್ರಾಫಿಕ್ ಮಧ್ಯೆ ಸಿಲುಕಿದ್ದ ವ್ಯಕ್ತಿಯೊಬ್ಬರು, ಮತ್ತೊಬ್ಬರ ಸಹಾಯದಿಂದ ತಮ್ಮ ಸ್ಕೂಟರ್ ಅನ್ನು ಹೆಗಲ ಮೇಲೆ ಹೊತ್ತುಕೊಂಡು ಮುಂದೆ ಸಾಗಿದ್ದಾರೆ. ಇದನ್ನು ನೋಡಿದ ಇತರ ವಾಹನ ಸವಾರರು ಆಶ್ಚರ್ಯಚಕಿತರಾಗಿದ್ದಾರೆ.
“ಗುರುಗ್ರಾಮದ ಟ್ರಾಫಿಕ್‌ಗೆ ಇದೊಂದೇ ಪರಿಹಾರ, ಇನ್ನು ಹೀಗೆಯೇ ಮಾಡಬೇಕು” ಎಂಬ ಅಡಿಬರಹದೊಂದಿಗೆ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ.
ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋಗೆ ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಬ್ಬರು, “ಹೊಸ ಬ್ಯುಸಿನೆಸ್: 500 ರೂಪಾಯಿಗೆ ಬೈಕ್ ಅನ್ನು ರಸ್ತೆಯ ಇನ್ನೊಂದು ಬದಿಗೆ ಸಾಗಿಸಿಕೊಡಲಾಗುವುದು” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಪಟ್ಟಣಕ್ಕೆ ಹೊಸ ಬಾಹುಬಲಿ ಬಂದಿದ್ದಾನೆ” ಎಂದು ಬರೆದಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ದೆಹಲಿ-ಎನ್‌ಸಿಆರ್‌ನಲ್ಲಿ ‘ಆರೆಂಜ್’ ಮತ್ತು ‘ಯೆಲ್ಲೋ’ ಅಲರ್ಟ್ ಘೋಷಿಸಿದೆ. ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಸೆಪ್ಟೆಂಬರ್ 4 ರಂದು ಹರಿಯಾಣ ಮತ್ತು ಚಂಡೀಗಢದಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ. ಗುರುಗ್ರಾಮದಲ್ಲಿ ‘ಆರೆಂಜ್ ಅಲರ್ಟ್’ ಮತ್ತು ನೋಯ್ಡಾ, ಘಾಜಿಯಾಬಾದ್‌ನಲ್ಲಿ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಯಮುನಾ ನದಿಯ ಮಟ್ಟವೂ ಅಪಾಯದ ಮಟ್ಟವನ್ನು ಮೀರಿದ್ದು, ಹಲವು ಪ್ರದೇಶಗಳು ಮುಳುಗಡೆಯಾಗಿವೆ.